ಹಾವೇರಿ : ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ ಚರ್ಚಿಸಲು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಜೊತೆ ಅಧಿಕಾರಿಗಳ ಸಭೆ ನಡೆಸುತ್ತಿರುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ 2 ಕೋಟಿ ಲಸಿಕೆ ಪೂರೈಸುವ ಅಂತಾರಾಷ್ಟ್ರೀಯ ಮಟ್ಟದ ಟೆಂಡರ್ ಕರೆಯಲಾಗಿದೆ. ಇದರಲ್ಲಿ ಸ್ಫುಟ್ನಿಕ್ ಪೈಝರ್ ಲಸಿಕೆ ಸೇರಿದಂತೆ ವಿವಿಧ ಕಂಪನಿಗಳು ಪಾಲ್ಗೊಳ್ಳಲಿವೆ.
ನಮ್ಮ ಎಕ್ಸ್ಪರ್ಟ್ ಸಮಿತಿ ಯಾವುದನ್ನು ಆಯ್ಕೆ ಮಾಡುವುದು ಅದನ್ನ ಜನರಿಗೆ ನೀಡುವುದಾಗಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಹಾವೇರಿ ಜಿಲ್ಲೆಗೆ ಪ್ರಸ್ತುತ 8 ರಿಂದ 10 ಮೆಟ್ರಿಕ್ ಟನ್ ಆಮ್ಲಜನಕ ಅಗತ್ಯವಿದ್ದು,ಇಷ್ಟು ಆಮ್ಲಜನಕ ಪೂರೈಕೆಯಾದರೇ ಆಮ್ಲಜನಕ ಸಮಸ್ಯೆ ನಿಭಾಯಿಸಬಹುದು.
ಈ ಕುರಿತಂತೆ ಸಿಎಂ ಬಿ ಎಸ್ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿರುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಆರೋಗ್ಯ ಸಚಿವ ಕೆ ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಹೊಸದಾಗಿ ಕೇಳಿ ಬರುತ್ತಿರುವ ವೈಟ್ ಫಂಗಸ್ ಕಾಯಿಲೆ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಸದಾನಂದಗೌಡರ ಜೊತೆ ಚರ್ಚಿಸಲಾಗಿದೆ.
ರಾಜ್ಯಕ್ಕೆ ಬೇಕಾಗುವ ಅಗತ್ಯ ಔಷಧಿಗಳನ್ನು ಕಳಿಸಿಕೊಡುವ ಭರವಸೆಯನ್ನ ಸದಾನಂದಗೌಡರು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಕೇಂದ್ರದಿಂದ 1050 ವಯಲ್ಸ್ ಔಷಧಿ ಕಳಿಸಿಕೊಟ್ಟಿದ್ದಾರೆ ಎಂದು ಇದೇ ವೇಳೆ ಹೇಳಿದ್ರು.
ಕೇಂದ್ರಕ್ಕೆ ನಾವು 25000 ವಯಲ್ಸ್ ಬೇಡಿಕೆ ಇಟ್ಟಿದ್ದೇವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ನಮಗೆ 10 ಸಾವಿರ ವಯಲ್ಸ್ ಕಳಿಸಿಕೊಡಲಿದ್ದಾರೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ಲಾಕ್ಡೌನ್ನಿಂದಾಗಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಈಗಾಗಲೇ ತಜ್ಞರು ಹೇಳಿದ ಪ್ರಕಾರ ಜೂನ್ ಅಂತ್ಯದ ವೇಳೆಗೆ ಎರಡನೇ ಅಲೆ ಕೊನೆಗೊಳ್ಳಲಿದೆ ಎಂದು ತಿಳಿಸಿದರು.
ಪ್ರತಿ ತಾಲೂಕು ಆಸ್ಪತ್ರೆಗೆ 6 ವೆಂಟಿಲೇಟರ್ ಮತ್ತು 50 ಆಮ್ಲಜನಕ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಕೊರತೆ ಇದ್ದಲ್ಲಿ ಸೌಲಭ್ಯ ವಿಸ್ತರಿಸುವ ಜೊತೆಗೆ ಸಿಬ್ಬಂದಿ ಕೊರತೆಯನ್ನ ಒಂದು ವಾರದೊಳಗೆ ಸರಿಪಡಿಸುವ ಇಂಗಿತವನ್ನ ಕೆ.ಸುಧಾಕರ್ ತಿಳಿಸಿದರು.