ರಾಣೆಬೆನ್ನೂರ : ಕೆಪಿಜೆಪಿ ಪಕ್ಷದ ಮೂಲಕ 2018ರಲ್ಲಿ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಆರ್.ಶಂಕರ್ ಅವರು 3 ವರ್ಷದಲ್ಲಿ ಮೂರನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.
ರಾಣೆಬೆನ್ನೂರ ಕ್ಷೇತ್ರದಿಂದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಸಭಾಪತಿ ಕೆ ಬಿ ಕೋಳಿವಾಡ ವಿರುದ್ಧ 4,338 ಮತಗಳ ಅಂತರದಿಂದ ಗೆಲುವು ಸಾಧಿಸಿ ಪ್ರಪ್ರಥಮವಾಗಿ ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲದೆ, ರಾಜ್ಯದಲ್ಲಿ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾದ ಏಕೈಕ ಶಾಸಕ ಎಂದು ಗುರುತಿಸಿಕೊಂಡ ಅವರಿಗೆ ಸರ್ಕಾರ ರಚನೆ ಸಮಯದಲ್ಲಿ ಬೇಡಿಕೆ ಹೆಚ್ಚಾಗಿತ್ತು.
ಇದನ್ನೂ ಓದಿ...ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.. ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸರ್ಕಾರ ಅವರಿಗೆ ಜೈವಿಕ ಪರಿಸರ ಮತ್ತು ಅರಣ್ಯ ಖಾತೆ ನೀಡಿತ್ತು. ಸ್ವಲ್ಪ ದಿನಗಳ ಬಳಿಕ ಆರ್ ಶಂಕರ್ ಮೇಲೆ ಕೆಲ ಆರೋಪಗಳು ಕೇಳಿ ಬಂದ ಹಿನ್ನೆಲೆ ಸಂಪುಟದಿಂದ ಕೈಬಿಡಲಾಗಿತ್ತು. ನಂತರ ಅವರು ಪಕ್ಷಾಂತರಕ್ಕೆ ಮುಂದಾದಾಗ ಸಮ್ಮಿಶ್ರ ಸರ್ಕಾರ ಬೀಳುತ್ತದೆ ಎಂಬ ಉದ್ದೇಶದಿಂದ ಮತ್ತೆ 2ನೇ ಬಾರಿ ಪೌರಾಡಳಿತ ಮಂತ್ರಿ ಸ್ಥಾನ ನೀಡಲಾಗಿತ್ತು.
ಆದರೆ, ಸರ್ಕಾರದ ಬಗ್ಗೆ ನಿರಾಶೆ ಹೊಂದಿದ ಆರ್.ಶಂಕರ್ 2019ರಲ್ಲಿ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
ಪಕ್ಷಾಂತರ ಹಿನ್ನೆಲೆ ಅಂದಿನ ಸ್ಪೀಕರ್, ಆರ್.ಶಂಕರ್ ಶಾಸಕ ಸ್ಥಾನವನ್ನು ಅನರ್ಹತೆಗೊಳಿಸಿದರು. ಇದರಿಂದ ಶಾಸಕ ಸ್ಥಾನ ಕಳೆದುಕೊಂಡ ಶಂಕರ್ಗೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಹ ನೀಡಲಿಲ್ಲ.
ಒಂದು ವರ್ಷದಿಂದ ಅಧಿಕಾರದಿಂದ ದೂರವಿದ್ದ ಶಂಕರ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರು. ಈಗ ಮತ್ತೆ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದು, ಮೂರು ವರ್ಷದಲ್ಲಿ ಮೂರು ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.