ಹಾವೇರಿ: ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಚದುರಂಗ ನಾಟಕದ ಹಿಂದೆ ಒಬ್ಬ ಸೂತ್ರದಾರನಿದ್ದಾನೆ. ಆ ಸೂತ್ರದಾರ ಯಾರು ಎಂದು ಎಲ್ಲರಿಗೂ ಗೊತ್ತಿದೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹೇಳಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಸದ್ಯದ ರಾಜಕಾರಣ ನೋಡಿದರೆ ತಮಗೆ ನೋವಾಗಿದೆ. ಇಂತಹ ಪರಿಸ್ಥಿತಿ ಬರಬಾರದಾಗಿತ್ತು. ಅತೃಪ್ತಿಯ ಹೊಗೆ ದಟ್ಟವಾಗಿರುವುದೇ ಈ ಪರಿಸ್ಥಿತಿಗೆ ಕಾರಣ ಎಂದು ಕೋಳಿವಾಡ ಅಭಿಪ್ರಾಯಪಟ್ಟಿದ್ದಾರೆ. ಶಾಸಕರ ರಾಜೀನಾಮೆ ವಿಚಾರ ಬಂದಾಗ ಸ್ಪೀಕರ್ಗೆ ಕಡಿಮೆ ಅಧಿಕಾರವಿದೆ ಎಂದು ಕೋಳಿವಾಡ ತಿಳಿಸಿದರು.
ನಾನು ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಮಾಡಿದ್ದಾಗ ವಿರೋಧಿಸಿದ್ದೆ. ಈಗಲೂ ಸಹ ಮೈತ್ರಿ ಸರ್ಕಾರ ಬೇಡ ಎಂದು ಹೇಳಿದ್ದೆ. ಆದರೆ ಮೈತ್ರಿ ಸರ್ಕಾರ ರಚನೆಯಾಯಿತು. ಈಗ ನಾವು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಬಿಜೆಪಿಗೆ ಅಧಿಕಾರ ನೀಡಿ ಪಕ್ಷವನ್ನ ಕಟ್ಟುವ ಕೆಲಸ ಮಾಡೋಣ ಎಂದರು. ತಮ್ಮ ಕ್ಷೇತ್ರದ ಶಾಸಕ ಆರ್.ಶಂಕರ್ ವಿರುದ್ಧ ಹರಿಹಾಯ್ದ ಕೋಳಿವಾಡ, ಆರ್.ಶಂಕರ್ ನಮ್ಮ ಕ್ಷೇತ್ರದ ಮತದಾರರ ಮಾನ ಮರ್ಯಾದೆ ತೆಗೆದಿದ್ದಾರೆ ಎಂದು ಹರಿಹಾಯ್ದರು.