ಹಾವೇರಿ : ಕುರಿಯನ್ನು ಕದಿಯಲು ಬಂದ ಕಳ್ಳರು ಕುರಿಗಾಯಿಯನ್ನು ಕೊಲೆ ಮಾಡಿ, ಕುರಿಗಳನ್ನು ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಕುರಿಗಾಹಿಯನ್ನು ವೆಂಕಟೇಶ ಮತ್ತೂರು (50) ಎಂದು ಗುರುತಿಸಲಾಗಿದೆ. ಕುರಿ ಕಳ್ಳತನಕ್ಕೆ ಬಂದ ಕಳ್ಳರು ಕುರಿಗಾಹಿಯನ್ನು ಹೊಡೆದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ವೆಂಕಟೇಶ ಗಂಗಾಪುರ ಗ್ರಾಮದ ಬಳಿ ಇರೋ ತನ್ನ ಜಮೀನಿನಲ್ಲಿ ಕುರಿದೊಡ್ಡಿ ಮಾಡಿಕೊಂಡು ಕುರಿ ಸಾಕಾಣಿಕೆ ಮಾಡಿಕೊಂಡಿದ್ದ. ತಡ ರಾತ್ರಿ ಕುರಿ ಕಳ್ಳತನಕ್ಕೆ ಬಂದಿದ್ದ ಖದೀಮರಿಗೆ ವೆಂಕಟೇಶ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಈ ಸಂದರ್ಭದಲ್ಲಿ ಕಳ್ಳರು ಕುರಿಗಾಯಿ ವೆಂಕಟೇಶನನ್ನು ಥಳಿಸಿ ಕುರಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಹಲ್ಲೆಗೆ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ದೊಡ್ಡಿಯಲ್ಲಿದ್ದ 40 ಕುರಿಗಳನ್ನು ಕಳ್ಳರು ಕದ್ದೊಯ್ದಿರುವುದಾಗಿ ಹೇಳಲಾಗಿದೆ. ಘಟನಾ ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಸಿಪಿಐ ಶ್ರೀಶೈಲ ಚೌಗಲಾ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.