ರಾಣೇಬೆನ್ನೂರ: ಮಹಾಮಾರಿ ಕೊರೊನಾ ತಾಲೂಕಿನ ರೈತರಿಗೆ ಸಂಕಷ್ಟ ತಂದಿಟ್ಟಿದೆ. ಭತ್ತದ ಬೆಳೆ ಬೆಳೆದ ರೈತರು ಬೆಳೆ ಮಾರಾಟ ಮಾಡಲಾಗದೆ ತೊಂದರೆಯಲ್ಲಿದ್ದಾರೆ.
ತಾಲೂಕಿನ ಚಂದಾಪುರ, ಮೇಡ್ಲೆರಿ, ಹೊಳೆ ಆನ್ವೆರಿ, ಉದಗಟ್ಟಿ ಗ್ರಾಮದ ರೈತರು ಭರಪೂರ ಭತ್ತ ಬೆಳೆದು, ಕಟಾವು ಮಾಡಿ ರಸ್ತೆ ಮೇಲೆ ರಾಶಿ ಹಾಕಿದ್ದಾರೆ. ಆದರೆ ಮಹಾಮಾರಿ ಕೊರೊನಾ ಭತ್ತದ ಬೆಳೆ ಹಾಳು ಮಾಡಿದೆ. ಕಳೆದ ಬಾರಿಯೂ ಸಹ ಭತ್ತದ ಸೀಜನ್ ವೇಳೆ ಕೊರೊನಾ ನಿರ್ಮೂಲನೆಗೆ ಲಾಕ್‌ಡೌನ್ ಮಾಡಲಾಯಿತು. ಇದರಿಂದ ಬೆಳೆಗೆ ಹಾಕಿದ ಅಸಲೂ ಕೂಡಾ ವಾಪಸ್ ಬರಲಿಲ್ಲ. ಈ ಬಾರಿ ಮತ್ತೆ ಸೀಜನ್ ಪ್ರಾರಂಭವಾಗಿದೆ ಮತ್ತೆ ಲಾಕ್ ಡೌನ್ ಜಾರಿಯಾಗಿದೆ. ಪರಿಣಾಮ, ಎಕರೆಗೆ 45 ಸಾವಿರ ರೂಪಾಯಿ ಖರ್ಚು ಮಾಡಿರುವ ರೈತರು ಕೈ ಸುಟ್ಟುಕೊಂಡಿದ್ದಾರೆ.
ಈ ಬಾರಿ ಬೆಳೆ ಚೆನ್ನಾಗಿ ಬಂದಿದೆ. ಆದ್ರೆ ಲಾಕ್ ಡೌನ್‌ನಿಂದಾಗಿ ರೈತರು ಬೆಳೆದ ಬೆಳೆ ರಸ್ತೆಯಲ್ಲೇ ಕೊಳೆಯುತ್ತಿದೆ. ಇನ್ನೂ ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಲು ಅವಕಾಶವಿರದ ಕಾರಣ ಭತ್ತದ ಖರೀದಿಗೆ ಯಾರೂ ಬರುತ್ತಿಲ್ಲ. ಇತ್ತ ಸರ್ಕಾರವು ಕೂಡ ರೈತರ ಸಂಕಷ್ಟಕ್ಕೆ ಸ್ಪಂದಿ ಸುತ್ತಿಲ್ಲ. ಇನ್ನು ಕೃಷಿ ಸಚಿವರು ನಮ್ಮ ಜಿಲ್ಲೆಯವರಾದರೂ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.