ಹಾವೇರಿ: ನೀರಿನ ಸಂಪ್ಗೆ ಬಿದ್ದು ಏಳು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಾನಗಲ್ ತಾಲೂಕಿನ ಹರವಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು 7 ವರ್ಷದ ಗಿರೀಶ್ ದೇಸಾಯಿ ಎಂದು ಗುರುತಿಸಲಾಗಿದೆ. ಭಾನುವಾರ ಶಾಲೆ ರಜೆ ಇರುವ ಹಿನ್ನೆಲೆ ಗೆಳೆಯರೊಂದಿಗೆ ಆಟ ಆಡಲು ಹೊರಗೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಗ್ರಾಮದ ಬಳಿ ಇರೋ ರೈತರ ಜಮೀನಿಗೆ ನೀರು ಹಾಯಿಸಲು ನಿರ್ಮಿಸಿದ್ದ ಏತ ನೀರಾವರಿ ಯೋಜನೆಯ ಸಂಪ್ನಲ್ಲಿ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಮಗುವಿನ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಆಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.