ಹಾವೇರಿ: ಆನ್ಲೈನ್ ತರಗತಿ ನೆಪದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಶಾಲೆಯ ಶಿಕ್ಷಕ ಮಲ್ಲಪ್ಪ ತಳವಾರ ಆರೋಪಿಯಾಗಿದ್ದಾನೆ. ಗ್ರಾಮದ ವಿದ್ಯಾರ್ಥಿನಿಯೊಬ್ಬಳು ಕೆಲ ದಿನಗಳಿಂದ ಶಾಲೆಗೆ ಹೋಗಲು ಹಿಂಜರಿದಿದ್ದಾಳೆ. ಇದನ್ನು ಪ್ರಶ್ನಿಸಿದ ಪೋಷಕರಿಗೆ ವಿದ್ಯಾರ್ಥಿನಿ ಶಿಕ್ಷಕನ ದೌರ್ಜನ್ಯವನ್ನು ತಿಳಿಸಿದ್ದಾಳೆ. ಇದರಿಂದ ಕ್ರೋಧಗೊಂಡ ಪೋಷಕರು ಊರಿನ ಜನರೊಂದಿಗೆ ಶಾಲೆಗೆ ಧಾವಿಸಿದ್ದಾರೆ.
ಇದನ್ನೂ ಓದಿ: ಮಹಿಳಾ ಕಾನ್ಸ್ಟೇಬಲ್ 'ಪುರುಷ'ನಾಗಿ ಬದಲಾಗಲು ಅನುಮತಿ ನೀಡಿದ ರಾಜ್ಯ ಸರ್ಕಾರ
ಅಷ್ಟರಲ್ಲಾಗಲೇ ಶಿಕ್ಷಕ ಮಲ್ಲಪ್ಪ ತಳವಾರ್ ಶಾಲೆಯಿಂದ ಪರಾರಿಯಾಗಿದ್ದಾನೆ. ಬಳಿಕ ಮುಖ್ಯ ಶಿಕ್ಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನನ್ನು ವಜಾ ಮಾಡಬೇಕು ಎಂದು ಇದೇ ವೇಳೆ ಗ್ರಾಮಸ್ಥರು ಒತ್ತಾಯಿಸಿದರು.
ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಲಾಗುವುದು ಎಂದು ಮುಖ್ಯಶಿಕ್ಷಕರು ತಿಳಿಸಿದ್ದಾರೆ. ಈ ಹಿಂದೆಯೂ ಶಿಕ್ಷಕ ಮಲ್ಲಪ್ಪ ತಳವಾರ್ ಇದೇ ರೀತಿಯ ಪ್ರಕರಣದಲ್ಲಿ ಸಿಲುಕಿ 10 ತಿಂಗಳು ಅಮಾನತುಗೊಂಡಿದ್ದರು ಎಂದು ತಿಳಿದು ಬಂದಿದೆ.