ಹಾನಗಲ್: ಕೊರೊನಾ ವೈರಸ್ನಿಂದ ಎಲ್ಲ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಇದರಿಂದ ಅದೆಷ್ಟೋ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಹಾನಗಲ್ ಅತಿಥಿ ಶಿಕ್ಷಕರೊಬ್ಬರ ಸಂಕಷ್ಟವನ್ನು ವಿಘ್ನ ವಿನಾಶಕ ಗಣೇಶ ನಿವಾರಿಸಿದ್ದಾನೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರ ಪಟ್ಟಣದ ಶಿಕ್ಷಕ ಎಂ.ಜಿ.ಕಮ್ಮಾರ ಎಂಬ ಶಿಕ್ಷಕ, ತಮ್ಮ ಜೀವನ ನಿರ್ವಹಣೆಗಾಗಿ ಗಣೇಶ ಮೂರ್ತಿಗಳನ್ನ ತಯಾರಿಸಿ ಉದ್ಯೋಗ ಕಂಡುಕೊಂಡಿದ್ದಾರೆ.
ಅಕ್ಕಿಆಲೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತಿದ್ದ ಇವರು, ಶಾಲೆಗಳು ಬಂದ್ ಆದ ಮೇಲೆ ಉದ್ಯೋಗವಿಲ್ಲದೆ ಮನೆಯಲ್ಲಿದ್ದರು. ಆದರೆ ಇದೀಗ ಗಣೇಶನ ಹಬ್ಬದ ನಿಮಿತ್ತ ಸ್ವತಃ ತಾವೇ ನೂರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನ ತಯಾರಿಸಿ ಜೀವನೋಪಾಯ ಕಂಡುಕೊಂಡಿದ್ದಾರೆ.
ಮೂಲತಃ ಚಿತ್ರಕಲೆ ಶಿಕ್ಷಕರಾಗಿರುವ ಎಂ.ಜಿ.ಕಮ್ಮಾರ ಗಣೇಶ ಮೂರ್ತಿಗಳನ್ನ ತಯಾರಿಸಿ ಪಟ್ಟಣದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಷ್ಟೆ ಅಲ್ಲ ಇವರು ತಯಾರಿಸಿದ ಮುತ್ತಿನ ಜೋಡಣೆಯ ಗಣಪ ಎಲ್ಲರ ಗಮನ ಸೆಳೆಯತ್ತಿದೆ.