ರಾಣೆಬೆನ್ನೂರ: ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದಲ್ಲಿರುವ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ 124 ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ಮಂದಿ ಶಿಕ್ಷಕರಿದ್ದಾರೆ. ಮೂರು ವರ್ಷಗಳಿಂದ ಇಂಗ್ಲಿಷ್, ವಿಜ್ಞಾನ ಬೋಧನೆ ಮಾಡಲು ಶಿಕ್ಷಕರೇ ಇಲ್ಲ. ವಿದ್ಯಾರ್ಥಿಗಳು ಹಲವು ಬಾರಿ ಮನವಿ ಸಲ್ಲಿಸಿದರೂ ಮೇಲಧಿಕಾರಿಗಳು ಮಾತ್ರ ಕ್ಯಾರೆ ಎಂದಿರಲಿಲ್ಲ. ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ.
ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗೆ ಏರಬೇಕು ಎಂಬ ಬಯಕೆ ನುಚ್ಚು ನೂರಾಗುತ್ತಿದೆ. ಶಿಕ್ಷಣಕ್ಕಾಗಿ ಸರ್ಕಾರ ಸುಖಾಸುಮ್ಮನೆ ಕೋಟಿ, ಕೋಟಿ ಸುರಿಯುತ್ತಿದೆ. ಶಿಕ್ಷಕರ ನೇಮಿಸಲು ಮಾತ್ರ ಮುಂದಾಗುತ್ತಿಲ್ಲ. ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಶಿಕ್ಷಣ ಹೇಳಿಕೊಡಬೇಕಾದ ಶಿಕ್ಷಕರು ಮಾತ್ರ ಇಲ್ಲಿ ಅಲಭ್ಯ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಇಒಗೆ ಮುತ್ತಿಗೆ..:ಶಿಕ್ಷಕರ ಶಾಲೆ ಸಮಯಕ್ಕೆ ಹಾಜರಾಗುವ ಸಮಯದಲ್ಲಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಇದಕ್ಕೆ ಗ್ರಾಮಸ್ಥರೂ ಸಾಥ್ ನೀಡಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಪಟ್ಟುಹಿಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಬಿಇಒಗೆ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಬುತ್ತಿಯನ್ನು ಬಿಚ್ಚಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಶೀಘ್ರ ಶಿಕ್ಷಕರನ್ನು ನೇಮಿಸುವಂತೆ ಮೇಲಿನ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.