ಹಾವೇರಿ: ಪ್ರಸ್ತುತ ದಿನಗಳಲ್ಲಿ ಚಿಕ್ಕವಯಸ್ಸಿನಲ್ಲೇ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ರೋಗಗಳು ಕಾಣಿಸಲಾರಂಭಿಸುತ್ತವೆ. ಆಧುನಿಕ ಜೀವನಶೈಲಿ ಮನುಷ್ಯನಿಗೆ ಹಲವು ಸಮಸ್ಯೆಗಳನ್ನು ತರುತ್ತಿದೆ. ಪ್ರಸ್ತುತ ಆಹಾರ ಪದ್ಧತಿ, ಒತ್ತಡದ ಬದುಕು ಸಹ ಮನುಷ್ಯನಿಗೆ ಹಲವು ದೈಹಿಕ ಹಾಗೂ ಮಾನಸಿಕ ರೋಗಗಳಿಗೆ ಕಾರಣವಾಗುತ್ತಿದೆ. ಆದರೆ ಹಾವೇರಿಯಲ್ಲೊಬ್ಬ ಅಜ್ಜಿ ಇದ್ದಾರೆ.. ಇವರಿಗೆ 88 ಬರೋಬ್ಬರಿ ವರ್ಷ ವಯಸ್ಸು.. ಆದರೆ ಈ ಯಸ್ಸಿನಲ್ಲೂ ಸಹ 18 ವರ್ಷದ ಯುವಜನತೆಯನ್ನು ನಾಚಿಸುವಂತಿದ್ದಾರೆ ಈ ಅಜ್ಜಿ.
ಹಲವು ಕಲೆಗಳಲ್ಲಿ ಪಾರಂಗತರು.. ಸಿದ್ದುಮತಿ ನೆಲವಿಗೆ ಎಂಬ ಹೆಸರಿನ ಈ ಅಜ್ಜಿ ಹಲವು ಕಲೆಗಳಲ್ಲಿ ಪಾರಂಗತರಾಗಿದ್ದಾರೆ. ಸಂಗೀತ, ಸಾಹಿತ್ಯ ಕ್ರೀಡೆಗಳಲ್ಲಿ ಈ ಇಳಿ ವಯಸ್ಸಿನಲ್ಲಿ ಸಹ ಮುಂದಿದ್ದಾರೆ. ಈ ಅಜ್ಜಿ 88 ರ ಇಳಿವಯಸ್ಸಿನಲ್ಲಿ ಸಹ ಕನ್ನಡಕದ ಸಹಾಯವಿಲ್ಲದೆ ಚಿಕ್ಕ ಚಿಕ್ಕ ಅಕ್ಷರಗಳನ್ನೂ ಓದುತ್ತಾರೆ. ಕ್ರೀಡೆಗಳಲ್ಲಿ ನಡಿಗೆ, ಗಾಯನ, ಚಿತ್ರಕಲೆ, ಏಕಪಾತ್ರ ಅಭಿನಯ, ರಂಗೋಲಿ, ಕೋಲಾಟ ಸೇರಿದಂತೆ ಹತ್ತು ಹಲವು ಕಲೆಗಳಲ್ಲಿ ಮುಂದಿದ್ದಾರೆ.
ಈ ಅಜ್ಜಿ ಇದುವರೆಗೆ ಸುಮಾರು 30 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೇವಲ ಮೂರು ಪುಸ್ತಕಗಳು ಮುದ್ರಣಗೊಂಡಿವೆ. ನಾಟಕ, ಹನಿಗವನ ಕಥೆ, ದೇವರ ಕಥಾನಕಗಳನ್ನು ಸಿದ್ದುಮತಿ ರಚಿಸಿದ್ದಾರೆ. ಹಲವು ಬರಹಗಳು ರಾಜ್ಯದ ಖ್ಯಾತ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಚಿತ್ರ ಅಂದರೆ ಈ ಅಜ್ಜಿ ಆರು ಸಂಗೀತ ವಾದ್ಯಗಳನ್ನು ನುಡಿಸುತ್ತಾರೆ.
ತಂಬೂರಿ, ತಬಲಾ, ಸಿತಾರಾ, ಜಲತಂರಂಗ, ಬುಲ್ ಬುಲ್ ತರಂಗ, ಕಾಸತರಂಗ ವಾದ್ಯಗಳನ್ನು ಸಿದ್ದುಮತಿ ನುಡಿಸುತ್ತಾರೆ. ಬೆಳಗಾವಿ ಜಿಲ್ಲೆ ಚೆನ್ನಮ್ಮ ಕಿತ್ತೂರಲ್ಲಿ ಜನಿಸಿದ ಸಿದ್ದುಮತಿ ಮದುವೆಯಾಗಿ ಹಾವೇರಿಗೆ ಆಗಮಿಸಿದ್ದಾರೆ. ಎಲ್ಲರನ್ನು ಪ್ರೀತಿಯಿಂದ ಕಾಣಿರಿ.. ಯಾವುದೇ ಸಮಸ್ಯೆ ಬರಲಿ ಧೈರ್ಯದಿಂದ ಇರಬೇಕು ಎನ್ನುವುದು ಇವರ ಆರೋಗ್ಯದ ಗುಟ್ಟು. ಇದಕ್ಕೆಲ್ಲಾ ಸ್ಥಳೀಯರ ಪ್ರೋತ್ಸಾಹ ಸಹಕಾರ ಸಹ ಕಾರಣ ಎಂದು ಸಿದ್ದುಮತಿ ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ನೆರವಾಗಿದ್ದ ಸಿದ್ದುಮತಿ.. ಚಿಕ್ಕವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಸಿದ್ದುಮತಿ ಹಲವು ಹೋರಾಟಗಾರರಿಗೆ ನೆರವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಸಂದೇಶಗಳನ್ನು ಮುಟ್ಟಿಸುವ ಮೂಲಕ ಚಳವಳಿಗಳಲ್ಲಿ ಪಾಲ್ಗೊಂಡಿದ್ದರು. ಮದುವೆಯಾದ ನಂತರ ಹಾವೇರಿಗೆ ಆಗಮಿಸಿದ ಸಿದ್ದುಮತಿ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಸೇರಿದಂತೆ ವಿವಿಧ ಹೋರಾಟಗಾರರ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಜ್ಞಾನಯೋಗಿ ಸಿದ್ದೇಶ್ವರಶ್ರೀಗಳ ಕುರಿತಂತೆ 300 ಕ್ಕೂ ಅಧಿಕ ಗೀತೆಗಳನ್ನು ಸಿದ್ದುಮತಿ ಬರೆದಿದ್ದಾರೆ.
ವಿವಿಧ ನೃತ್ಯ ಕಲೆಯಲ್ಲೂ ಪರಿಣಿತರು ಈ ಅಜ್ಜಿ.. ಕಲ್ಯಾಣ ಕ್ರಾಂತಿ, ಕಿತ್ತೂರು ಕಥನ, ಶಿವಶರಣರ ದೃಷ್ಠಿಯಲ್ಲಿ ಸಹಕಾರ, ಪಂಚಾಕ್ಷರಮಂತ್ರ ಮಹಿಮೆ, ಉಡುತಡೆಯ ಉಡುಗೊರೆ, ಅತಿವೃಷ್ಟಿ ಅನಾವೃಷ್ಟಿ ಸೇರಿದಂತೆ ಹಲವು ಕೃತಿಗಳನ್ನು ಸಿದ್ದುಮತಿ ರಚಿಸಿದ್ದಾರೆ. ಆಕಾಶವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಸಾರವಾಗಿವೆ. ಭರತನಾಟ್ಯ, ಕಥಕ್ಕಳಿ, ಮಣಿಪುರಿ ಸೇರಿದಂತೆ ಹಲವು ನೃತ್ಯಗಳಲ್ಲಿ ಸಹ ಸಿದ್ದುಮತಿ ಪರಿಣಿತರಾಗಿದ್ದಾರೆ. ಸಿದ್ದುಮತಿ ಕನ್ನಡ ಮತ್ತು ಹಿಂದಿಯಲ್ಲಿ ಎಂಎ ಓದಿದ್ದು ಐದು ಸರ್ಕಾರಿ ನೌಕರಿಗಳು ಇವರನ್ನು ಹುಡುಕಿಕೊಂಡು ಬಂದಿದ್ದವಂತೆ. ತಂದೆ ಬೇಡ ಎಂದಿಕ್ಕೆ ಸಿದ್ದುಮತಿ ಸರ್ಕಾರಿ ನೌಕರಿಗೆ ಹೋಗಲಿಲ್ಲವಂತೆ.
ಆರೋಗ್ಯದ ಗುಟ್ಟು ಬಿಚ್ಚಿಟ್ಟ ಸಿದ್ದುಮತಿ.. 2014 ರಿಂದ ಹಿರಿಯ ನಾಗರಿಕರ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಅಂದಿನಿಂದ ಇಲ್ಲಿಯವರೆಗೆ ರಾಜ್ಯಮಟ್ಟದಲ್ಲಿ 20ಕ್ಕೂ ಅಧಿಕ ಪದಕಗಳನ್ನು ಸಿದ್ದುಮತಿ ಮುಡಿಗೇರಿಸಿಕೊಂಡಿದ್ದಾರೆ. ಸದಾ ಚಟುವಟಿಕೆಯಲ್ಲಿರುವುದು.. ಒಂದಿಲ್ಲ ಒಂದು ಕಾರ್ಯದಲ್ಲಿ ಸದಾ ನಿರತವಾಗಿರುವುದು.. ತಮ್ಮ ಆರೋಗ್ಯದ ಗುಟ್ಟು ಎನ್ನುತ್ತಾರೆ ಸಿದ್ದುಮತಿ. ಈ ಇಳಿವಯಸ್ಸಲ್ಲಿ ಸಹ ಕೋಲಾಟ, ಭರತನಾಟ್ಯ ರಂಗೋಲಿಗಳನ್ನು ಚಿಕ್ಕಮಕ್ಕಳಿಗೆ ಸಿದ್ದುಮತಿ ಹೇಳಿಕೊಡುತ್ತಿದ್ದಾರೆ.
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಹಿತ್ಯದಲ್ಲಿ ಛಾಪು ಮೂಡಿಸುವ ಸಿದ್ದುಮತಿ ಅಜ್ಜಿಯಿಂದ ಇನ್ನಷ್ಟು ಕೃತಿಗಳ ಬರಲಿ.. ಅವರ ಸಾಧನೆಗೆ ಪ್ರಶಸ್ತಿಗಳು ಸಿಗಲಿ.. ಈ ಅಜ್ಜಿ ಶತಾಯುಷಿಯಾಗಿ ಯುವಕರಿಗೆ ಪ್ರೇರಣಿಯಾಗಲಿ ಎಂಬುದು ನಮ್ಮ ಆಶಯ.
ಓದಿ: ಮಹಿಳೆಯರ ವಿವಾಹ ವಯಸ್ಸು 18 ರಿಂದ 21ಕ್ಕೆ ಹೆಚ್ಚಳ: ಪರಿಶೀಲನಾ ಸಂಸತ್ ಸಮಿತಿಗೆ 3 ತಿಂಗಳ ಗಡುವು ವಿಸ್ತರಣೆ