ಹಾವೇರಿ/ಧಾರವಾಡ/ಬೆಳಗಾವಿ: ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ 3ರ ಸಾಫ್ಟ್ ಲ್ಯಾಂಡಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ 6:04 ಗಂಟೆಗೆ ಲ್ಯಾಂಡರ್ ಮಾಡ್ಯೂಲ್-ವಿಕ್ರಮ್ ಚಂದ್ರನನ್ನು ಸ್ಪರ್ಶಿಸಲಿದೆ. ಈ ನಿಟ್ಟಿನಲ್ಲಿ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ಹಾವೇರಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶ್ರೀರಾಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀರಾಮ, ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಮಾಡಿ ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಜನರಿಗೆ ಸಿಹಿ ಹಂಚಿದ ಕಾರ್ಯಕರ್ತರು ದೇಶದ ವಿಜ್ಞಾನಿಗಳ ಪರಿಶ್ರಮ ಯಶಸ್ವಿಯಾಗಬೇಕು ಎಂದು ಶುಭ ಹಾರೈಸಿದರು. ಬಿಜೆಪಿ ಹಾವೇರಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಸೇರಿದಂತೆ ಬಿಜೆಪಿಯ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಬಿ.ಸಿ ಪಾಟೀಲ್ ಪೂಜೆ: ಚಂದ್ರಯಾನ ಯಶಸ್ಸಿಗೆ ಪ್ರಾರ್ಥಿಸಿ ಮಾಜಿ ಸಚಿವ ಬಿ.ಸಿ ಪಾಟೀಲ್ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಿರೇಕೆರೂರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪಾಟೀಲ್ ಅವರು ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ನೂರಾರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಜೊತೆಗಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಇಸ್ರೋ ವಿಜ್ಞಾನಿಗಳು ಹಾಗೂ ಆಂಜನೇಯ ಸ್ವಾಮಿಗೆ ಜೈಕಾರ ಹಾಕಿದರು.
ವಿಶೇಷ ಪೂಜೆ ಸಲ್ಲಿಸಿದ ಧಾರವಾಡ ವಿದ್ಯಾರ್ಥಿಗಳು: ಧಾರವಾಡದ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಯಾಗದಂತೆ ಲ್ಯಾಂಡಿಂಗ್ ರೋವರ್ ಯಶಸ್ವಿಯಾಗಿ ಲ್ಯಾಂಡ್ ಆಗಲಿ ಎಂದು ಪ್ರಾರ್ಥಿಸಿ ವಿದ್ಯಾರ್ಥಿಗಳು ಗಣೇಶನಿಗೆ ಪೂಜೆ ಸಲ್ಲಿಸಿದ್ದಾರೆ. ಲ್ಯಾಂಡರ್ ಮತ್ತು ರೋವರ್ಗಳ ಮಾದರಿಯನ್ನು ಸಿದ್ಧಪಡಿಸಿ ಪೂಜೆ ಮಾಡಿದ್ದಾರೆ. ಕಲಾವಿದ ಮಂಜುನಾಥ್ ಎಂಬುವವರು ಚಂದ್ರನ ಮೇಲೆ ರೋವರ್ ಇಳಿಸಿದ ರೀತಿಯ ಕಲಾಕೃತಿ ರಚನೆ ಮಾಡಿದ್ದರು.
ಚಂದ್ರಯಾನ 3 ಯಶಸ್ವಿಗೆ ಶುಭ ಹಾರೈಸಿದ ಶ್ರೀಶೈಲ ಜಗದ್ಗುರು: ವಿಶ್ವವೇ ಕಾತರದಿಂದ ಕಾಯುತ್ತಿರುವ ಚಂದ್ರಯಾನ 3 ಯಶಸ್ವಿಯಾಗಲೆಂದು ಶ್ರೀಶೈಲ ಜಗದ್ಗುರುಗಳು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಶುಭ ಹಾರೈಸಿದ್ದಾರೆ. ಚಿಕ್ಕೋಡಿ ತಾಲೂಕಿನ ಯಡೂರ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು 'ಚಂದ್ರಯಾನ 3ಗೆ ಯಾವುದೇ ವಿಘ್ನಗಳು ಬಾರದಂತೆ ನಾವು ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ ವಿಶೇಷ ಪೂಜೆ, ವಿಶೇಷ ಮಂಗಳಾರತಿ ಸಲ್ಲಿಸಿದ್ದೇವೆ ಎಂದರು.
ಭವ್ಯ ಭಾರತದ ಆಶಾಕಿರಣವಾದ ಚಂದ್ರಯಾನ 3 ಚಂದ್ರನ ಮೇಲೆ ಇಳಿಯಲು ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ 2ದಂತೆ ಕೊನೆ ಘಳಿಗೆಯಲ್ಲಿ ವಿಫಲವಾಗದೇ ಚಂದ್ರಯಾನ 3 ಯಶಸ್ವಿಯಾಗಲಿ. ಚಂದ್ರನನ್ನು ತಲುಪಿ ನಮ್ಮ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆ ಮಾಡಲಿ. ಈಗಾಗಲೇ ಉಳವಿ ಸಮೀಪದ ಅನುಷ್ಠಾನದಲ್ಲಿ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಭಗವಂತನ ಕೃಪೆಯಿಂದ ಯಶಸ್ವಿಯಾಗಿ ಸಂಪನ್ನಗೊಳ್ಳಬೇಕು. ಇದಕ್ಕಾಗಿ ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗಕ್ಕೆ, ಜಗದ್ಗುರು ಸೂರ್ಯಸಿಂಹಾಸನ ಪಂಡಿತಾರಾಧ್ಯ ಪೀಠದ ಲಿಂಗೊದ್ಭವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಶ್ರೀಶೈಲದಲ್ಲಿ ವಿಶೇಷ ಪೂಜೆ, ವಿಶೇಷ ಮಂಗಳಾರತಿ ವ್ಯವಸ್ಥೆ ಮಾಡಲಾಗಿದೆ. ಆದಷ್ಟು ಬೇಗ ಸಿಹಿಸುದ್ದಿ ಬರಲಿ. ಭಾರತ ವಿಶ್ವದಾದ್ಯಂತ ತನ್ನ ಹೆಸರು ಗಳಿಸಲಿ ಎಂದು ಹಾರೈಸುವೆ ಎಂದು ಶ್ರೀಗಳು ಶುಭ ಕೋರಿದರು.
ಕಲಬುರಗಿಯಲ್ಲೂ ವಿಶೇಷ ಪೂಜೆ: ಇಲ್ಲಿನ ಕೆಎಚ್‌ಬಿ ಗ್ರೀನ್ ಪಾರ್ಕ್ ಕಾಲೋನಿಯ ಆಂಜನೇಯ ದೇವಸ್ಥಾನದಲ್ಲಿಯೂ ಪಂಚಾಮೃತ ಅಭಿಷೇಕ ಮಾಡಿ ಆಂಜನೇಯ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿ ಚಂದ್ರಯಾನ-3 ಯಶಸ್ಸಿಗೆ ಪ್ರಾರ್ಥಿಸಲಾಯಿತು. ವಿಜ್ಞಾನಿಗಳ ಪರಿಶ್ರಮಕ್ಕೆ ಯಶಸ್ಸು ಸಿಗಲಿ, ಚಂದ್ರಲೋಕದಲ್ಲಿ ಭಾರತದ ಬಾವುಟ ಹಾರಾಡಲಿ ಎಂದು ಕಲಬುರಗಿ ಜನತೆ ಹಾರೈಸಿದ್ದಾರೆ.
ಇದನ್ನೂ ಓದಿ: ಚಂದ್ರಯಾನ 3 ಯಶಸ್ವಿಯಾಗಲೆಂದು ದೇಶ, ವಿದೇಶಗಳಲ್ಲಿ ಪ್ರಾರ್ಥನೆ: ಹೋಮ, ಹವನ, ಪೂಜೆ ನಡೆಸುತ್ತಿರುವ ಭಕ್ತರು