ಹಾವೇರಿ: ಸಾಮಾನ್ಯವಾಗಿ ಪುಷ್ಕರಣಿಯಲ್ಲಿ, ಕೆರೆ ಹೊಂಡದಲ್ಲಿ ತೆಪ್ಪೋತ್ಸವ ಮಾಡುವುದು ನಮಗೆಲ್ಲ ಗೊತ್ತಿದೆ. ಆದರೆ ರಭಸವಾಗಿ ಮೈದುಂಬಿ ಹರಿಯುವ ನದಿಯಲ್ಲಿ ತೆಪ್ಪೋತ್ಸವ ಮಾಡಿರುವ ಘಟನೆ ಹಾವೇರಿ ತಾಲೂಕಿನ ಕೋಣನತಂಬಿಗೆ ಗ್ರಾಮದಲ್ಲಿ ನಡೆದಿದೆ.
ಹೌದು, ಮೈದುಂಬಿ ಹರಿಯುವ ವರದೆಯಲ್ಲಿ ತೆಪ್ಪೋತ್ಸವ ಜರುಗಿತು. ತಳಿರು ತೋರಣಗಳಿಂದ ಸಿಂಗರಿಸಿದ ರಥವನ್ನ ಕೋಣನತಂಬಿಗೆ ಗ್ರಾಮದಲ್ಲಿನ ಕಲ್ಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಮಾಡಲಾಯಿತು. ನಂತರ ನದಿ ಪಕ್ಕದಲ್ಲಿರುವ ಆಂಜನೇಯ ದೇವಸ್ಥಾನದ ಮುಂದೆ ತೆಪ್ಪದ ಮೇಲೆ ಗ್ರಾಮದ ಕಲ್ಮೇಶ್ವರ ಮತ್ತುಸಿದ್ಧಾರೂಢರ ಮೂರ್ತಿಗಳಿರುವ ರಥವಿಟ್ಟು ತೆಪ್ಪೋತ್ಸವ ಪ್ರಾರಂಭಿಸಲಾಯಿತು.
ಈಜುಕುಂಬಳ ಸಹಾಯದಿಂದ ಮತ್ತು ಟ್ಯೂಬ್‌ಗಳನ್ನ ಹಾಕಿಕೊಂಡ ಗ್ರಾಮಸ್ಥರು ವರದೆಯ ಇನ್ನೊಂದು ತಟಕ್ಕೆ ತೆಪ್ಪೋತ್ಸವ ತಗೆದುಕೊಂಡು ಹೋದರು. ಅಲ್ಲಿ ಪೂಜೆ ಸಲ್ಲಿಸಿ ಬಳಿಕ ಮರಳಿ ಗ್ರಾಮಕ್ಕೆ ತೆಪ್ಪೋತ್ಸವ ತರಲಾಯಿತು.
ಸಿದ್ಧಾರೂಢ ಈ ತೆಪ್ಪೋತ್ಸವಕ್ಕೆ ಒಂದು ಕಾರಣವಿದೆ. ಹುಬ್ಬಳ್ಳಿಯ ಸಿದ್ಧಾರೂಢರಿಗೆ ಗ್ರಾಮದಲ್ಲಿ ಸಾಕಷ್ಟು ಭಕ್ತರಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ನಡೆಯುವ ತೆಪ್ಪೋತ್ಸವಕ್ಕೆ ಕೋಣತಂಬಿಗೆ ಗ್ರಾಮದಿಂದ ನೂರಾರು ಭಕ್ತರು ಹೋಗುತ್ತಿದ್ದರಂತೆ. ಆದರೆ, ಒಂದು ಸಲ ಭಕ್ತರು ಹುಬ್ಬಳ್ಳಿಗೆ ಹೋಗುವಾಗ ಮಳೆಯಾಗಿ ಸಾಕಷ್ಟು ನೋವು ಅನುಭವಿಸಿದ್ದರಂತೆ.
ಇದನ್ನ ತಿಳಿದ ಸಿದ್ಧಾರೂಢರು ಪ್ರತಿವರ್ಷ ಹುಬ್ಬಳ್ಳಿಯಲ್ಲಿ ನಡೆಯುವ ತೆಪ್ಪೋತ್ಸವಕ್ಕಿಂತ ಹಿಂದಿನ ದಿನ ಕೋಣನತಂಬಿಗೆ ಗ್ರಾಮದಲ್ಲಿ ತೆಪ್ಪೋತ್ಸವ ಆಚರಿಸುವಂತೆ ತಿಳಿಸಿದ್ದರಂತೆ. ಅದರಂತೆ ಹುಬ್ಬಳ್ಳಿಯ ಸಿದ್ಧಾರೂಢ ಮಠದ ತೆಪ್ಪೋತ್ಸವದ ಮುನ್ನದಿನ ಕೋಣನತಂಬಿಗೆಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಇಂದು ತೆಪ್ಪೋತ್ಸವ ನಡೆಯಲಿದ್ದು, ಈ ಹಿನ್ನೆಲೆ ಹಾವೇರಿಯ ಕೋಣನತಂಬಿಗೆ ಗ್ರಾಮದಲ್ಲಿ ಶುಕ್ರವಾರ ತೆಪ್ಪೋತ್ಸವ ನಡೆಸಲಾಯಿತು.
ಇದನ್ನೂ ಓದಿ: ಸಿದ್ಧಾರೂಢರ ಮಹಾ ರಥೋತ್ಸವಕ್ಕೆ ಹರಿದು ಬಂತು ಭಕ್ತ ಸಾಗರ..