ಹಾವೇರಿ: ಇಂದು ವಿಶ್ವ ಮಹಿಳಾ ದಿನಾಚರಣೆ. ಎಲ್ಲೆಡೆ ಮಹಿಳಾ ಸಾಧಕಿಯರನ್ನು ಗುರುತಿಸುವ ಜೊತೆಗೆ ಸನ್ಮಾನಿಸಿ ಗೌರವಿಸಲಾಗುತ್ತದೆ. ಇಂತಹ ಅಪರೂಪದ ಮಹಿಳೆಯರಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಶೋಭಾ ತೋಟದ ಕೂಡ ಒಬ್ಬರು.
ಶೋಭಾ ತೋಟದ ಅವರು ಪುರುಷರು ಚಾಲನೆ ಮಾಡುವ ಬೃಹತ್ ಗಾತ್ರದ ವಾಹನಗಳನ್ನು ಲೀಲಾಜಾಲವಾಗಿ ಚಾಲನೆ ಮಾಡುತ್ತಾರೆ. ಚಾಲಕಿಯಾಗಬೇಕು ಎಂದು ಕನಸು ಹೊಂದಿದ್ದ ಇವರು ಅದರಂತೆ ನಾಲ್ಕು ಚಕ್ರದ ಕಾರು ಓಡಿಸುವ ಮೂಲಕ ಚಾಲನಾರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಆರಂಭವಾದ ಇವರ ಪಯಣ ಇದೀಗ 20 ಚಕ್ರದ ವಾಹನಗಳನ್ನು ಓಡಿಸುವ ಮಟ್ಟಿಗೆ ಬೆಳೆದು ನಿಂತಿದೆ. ಸಾರಿಗೆ ಇಲಾಖೆಯಲ್ಲಿ ತರಬೇತಿ ಪಡೆದ ಶೋಭಾ ಇದೀಗ ಹುಬ್ಬಳ್ಳಿಯ ಪ್ರತಿಷ್ಠಿತ ಕಂಪನಿಯಲ್ಲಿ ಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಮಹಿಳೆಯರು ದ್ವಿಚಕ್ರ ವಾಹನ ಚಾಲನೆ ಮಾಡುವುದನ್ನು ಕಾಣಬಹುದು. ನಗರದಲ್ಲಿ ಕೆಲ ಮಹಿಳೆಯರು ಕಾರು ಓಡಿಸುತ್ತಾರೆ. ಅಂಥದ್ರಲ್ಲಿ ಶೋಭಾ ಭಾರಿ ಗಾತ್ರದ ವಾಹನಗಳನ್ನು ಯಾವುದೇ ಅಳುಕಿಲ್ಲದೆ ಪುರುಷರಿಗೆ ಸೆಡ್ಡು ಹೊಡೆದು ಚಾಲನೆ ಮಾಡುತ್ತಾರೆ. ಟಿಪ್ಪರ್, ಲಾರಿ, ಬಸ್ ಸೇರಿದಂತೆ ಬೃಹತ್ ಗಾತ್ರದ ವಾಹನಗಳನ್ನು ಸುಲಭವಾಗಿ ಹ್ಯಾಂಡಲ್ ಮಾಡುತ್ತಾರೆ.
ಶೋಭಾರಿಗೆ ಮೊದಲು ಚಾಲಕಿಯಾಗಬೇಕು ಎನ್ನುವ ಕನಸಿದ್ದರೂ ಅವರ ಕನಸು ಎಲ್ಲರಂತಿರಲಿಲ್ಲ. ಆರಂಭದಲ್ಲಿ ಸಾಕಷ್ಟು ಅಡ್ಡಿ-ಆತಂಕಗಳ ನಡುವೆ ಗ್ರಾಮದಿಂದ ನಗರಕ್ಕೆ ಬಂದ ಶೋಭಾ ಕಾರ್ ಓಡಿಸುವುದನ್ನ ಕಲಿತರು. ಆ ನಂತರ ಪರಿಚಯದ ಚಾಲಕರ ಸಹಾಯದಿಂದ ದೊಡ್ಡ ದೊಡ್ಡ ವಾಹನಗಳನ್ನು ಓಡಿಸುವದನ್ನು ಕಲಿತಿದ್ದಾರೆ. ತಮ್ಮ ಚಾಲನಾ ನೈಪುಣ್ಯದಿಂದ ಇದೀಗ ಪ್ರತಿಷ್ಠಿತ ಕಂಪನಿಯಲ್ಲಿ ಚಾಲಕಿಯಾಗಿದ್ದಾರೆ.
ಇದನ್ನೂ ಓದಿ: Google ಪೇಜ್ ತೆರೆದರೆ ಸರ್ಪ್ರೈಸ್! ಮಹಿಳಾ ದಿನಕ್ಕೆ ಸ್ಪೆಷಲ್ ಡೂಡಲ್
ತಂದೆ ಭರಮಪ್ಪ ಮತ್ತು ಸಹೋದರನ ಜೊತೆ ಜೀವನ ಸಾಗಿಸುತ್ತಿರುವ ಶೋಭಾ, ತಾಯಿ ಕಳೆದುಕೊಂಡರೂ ಸ್ವಾವಲಂಬಿಯಾಗಿದ್ದಾರೆ. ತಾನು ದುಡಿದ ಹಣದಿಂದಲೇ ತಂದೆಯನ್ನು ಸಲಹುತಿದ್ದಾರೆ. ತಂದೆಗೆ ರಸ್ತೆ ಅಪಘಾತದಲ್ಲಿ ಕಾಲು ಮುರಿದಿದೆ. ಹೀಗಾಗಿ, ತಾನು ಮದುವೆಯಾಗಿ ಹೋದರೆ ತಂದೆಯನ್ನು ನೋಡಿಕೊಳ್ಳುವವರು ಯಾರೂ ಇರಲ್ಲ ಅಂತಾ ಮದುವೆಯನ್ನೇ ನಿರಾಕರಿಸಿದ್ದಾರೆ. ಇವರ ಸಾಧನೆ ನೋಡಿ ಈಗಾಗಲೇ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಈ ಚಾಲಕಿ ಹುಬ್ಬಳ್ಳಿಯಿಂದ ಬೆಳಗಾವಿ, ಗದಗ, ಮಂಗಳೂರು, ದಾವಣಗೆರೆ ಸೇರಿದಂತೆ ಹಲವು ನಗರಗಳಿಗೆ ಲಾರಿ ಓಡಿಸಿದ್ದಾರೆ. 10ನೇ ತರಗತಿ ವರೆಗೆ ಓದಿರುವ ಶೋಭಾಗೆ ಇದೀಗ ಸಾರಿಗೆ ಇಲಾಖೆಯಲ್ಲಿ ಚಾಲಕಿಯಾಗಬೇಕು ಎನ್ನುವ ಆಸೆ ಇದೆಯಂತೆ. ಅದಕ್ಕಾಗಿ ನಿರ್ವಾಹಕಿ ಮತ್ತು ಚಾಲಕಿ ಲೈಸನ್ಸ್ ಕೂಡ ಪಡೆದಿದ್ದಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಕಾರಣಾಂತರದಿಂದ ಸಾರಿಗೆ ನಿಗಮಗಳಲ್ಲಿ ನೇಮಕಾತಿಯಾಗಿಲ್ಲ. ಪರಿಣಾಮ ಖಾಸಗಿ ಕಂಪನಿಯ ಕೆಲಸದಲ್ಲೇ ತೃಪ್ತಿಪಟ್ಟುಕೊಂಡಿದ್ದಾರೆ.
ಇದನ್ನೂ ಓದಿ: ಮರಳಿನಲ್ಲಿ ಅರಳಿದ ಮಹಿಳಾ ಪ್ರಪಂಚ
ವಾಹನ ಚಾಲನಾ ವೃತ್ತಿಯಲ್ಲಿ ಮಹಿಳೆಯರು ಕಾಣಿಸಿಕೊಳ್ಳುವುದು ವಿರಳ. ಅದರಲ್ಲೂ ಬೃಹತ್ ಗಾತ್ರದ ವಾಹನಗಳ ಚಾಲನೆಯಲ್ಲಿ ಮಹಿಳೆಯರು ಕಂಡುಬರುವುದು ಕಡಿಮೆ. ಹೀಗಾಗಿ ಶೋಭಾರ ಛಲ ಉಳಿದ ಹೆಣ್ಣುಮಕ್ಕಳಿಗೆ ಮಾದರಿ, ಪ್ರೇರಣೆ.