ಹಾವೇರಿ : ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಿತ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆದಿರುವುದನ್ನ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್ ಹಿರೇಮಠ್ ಅವರು ಸ್ವಾಗತಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ತಡವಾಗಿಯಾದರೂ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದಿದೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕುರಿತಂತೆ ಕಾಯ್ದೆ ಮಾಡಿದರೆ ಅವರ ಹೋರಾಟಕ್ಕೆ ಸಾರ್ಥಕತೆ ದೊರಕುತ್ತದೆ ಎಂದರು.
ರಾಜ್ಯ ಸರ್ಕಾರವೂ ಸಹ ಭೂಸುಧಾರಣಾ ಕಾಯ್ದೆ, ಎಪಿಎಂಸಿ ರದ್ದು ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯಬೇಕು. ಇಲ್ಲದಿದ್ದರೆ, ಮುಂದಿನ ವರ್ಷ ಜನವರಿ 25ರಂದು ಚಳವಳಿ ಆರಂಭಿಸಲಾಗುವುದು. ಈ ಕುರಿತಂತೆ ಇದೇ ಡಿಸೆಂಬರ್ 26ರಂದು ಮೈಸೂರಿನಲ್ಲಿ ಪೂರ್ವಭಾವಿಯಾಗಿ ಸರ್ವಸಾಧಾರಣ ವಾರ್ಷಿಕ ಸಭೆ ಮಾಡಿ ಚರ್ಚಿಸುವುದಾಗಿ ತಿಳಿಸಿದರು.
ಜಿ.ಎಂ ಸಿದ್ದೇಶ್ವರ ಅವರು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಚಟ್ನಹಳ್ಳಿ ಬಳಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದ್ದಾರೆ. ಈ ಕುರಿತಂತೆ ಹಲವು ಇಲಾಖೆಗಳಿಗೆ ದೂರು ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಗಣಿಗಾರಿಕೆ ಬಂದ್ ಮಾಡಲು ಕ್ರಮ ಕೈಗೊಂಡಿದೆ. ಆದರೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಈ ಕುರಿತಂತೆ ಕ್ರಮಕೈಗೊಳ್ಳುವಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ಅಕ್ರಮ ಕಲ್ಲುಗಣಿಗಾರಿಕೆ ವಿರುದ್ದ ತಕ್ಷಣವೇ ಕ್ರಮಕೈಗೊಳ್ಳಬೇಕು. ಕಂಪನಿ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಒತ್ತಾಯಿಸಿದ ಅವರು, ಜಿ ಎಂ ಶುಗರ್ಸ್ ಗಣಿಗಾರಿಕೆಗೆ ನೀಡಿದ್ದ ವಿದ್ಯುತ್ ಸರಬರಾಜು ರದ್ದುಗೊಳಿಸಿರುವ ಹೆಸ್ಕಾಂ ಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು.
ಓದಿ: ಸಾಗರ ವಕೀಲರ ಭವನ ನಿರ್ಮಾಣ ಕುರಿತು ಸರ್ಕಾರದ ಸ್ಪಷ್ಟನೆ ಕೇಳಿದ ಹೈಕೋರ್ಟ್