ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಲಾಡ್ಜ್‌ನಲ್ಲಿ ನಡೆದ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಹಾವೇರಿ ಎಸ್ಪಿ ಅಂಶುಕುಮಾರ್ ಮಾಹಿತಿ ನೀಡಿದ್ದಾರೆ. ಹಾವೇರಿಯಲ್ಲಿ ಇಂದು ಮಾತನಾಡಿದ ಅವರು, ಜನವರಿ 10ರಂದು ಪ್ರಕರಣ ನಡೆದಿತ್ತು. ಒಬ್ಬ ಆರೋಪಿಯನ್ನು ಬಂಕಾಪುರ ಹಾಗೂ ಇನ್ನೊಬ್ಬನನ್ನು ದಾವಣಗೆರೆಯಲ್ಲಿ ಅರೆಸ್ಟ್ ಮಾಡಲಾಗಿದೆ. ಇಮ್ರಾನ್ ಬಶೀರ್ ಜಕಿನಕಟ್ಟಿ ಮತ್ತು ರೇಹಾನ್ ಮಹ್ಮದ್ ಹುಸೇನ್ ವಾಲೀಕಾರ್ ಬಂಧಿತರು ಎಂದು ತಿಳಿಸಿದರು.
ಲಾಡ್ಜ್‌ನಲ್ಲಿ ನಾಲ್ಕೈದು ಯುವಕರು ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಕುರಿತು ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯ ಹೇಳಿಕೆ ಪಡೆದು ಐಪಿಸಿ ಸೆಕ್ಷನ್‌ಗಳಾದ 307, 376ಡಿ ಸೇರಿಸಲಾಗಿದೆ. ಓರ್ವ ಡಿವೈಎಸ್ಪಿ, ಇಬ್ಬರು ಸಿಪಿಐ, ಆರು ಜನ ಪಿಎಸ್ಐ ತಂಡವನ್ನು ಬೇರೆ ಬೇರೆ ಕಡೆಗಳಿಗೆ ಕಳುಹಿಸಲಾಗಿದೆ. ಹತ್ತನೇ ತಾರೀಖಿನಂದು ಮೂವರನ್ನು ಬಂಧಿಸಲಾಗಿತ್ತು. ಒಬ್ಬರು ಆಸ್ಪತ್ರೆಯಲ್ಲಿದ್ದು, ಡಿಸ್ಚಾರ್ಜ್ ನಂತರ ಆತನನ್ನೂ ಬಂಧಿಸುತ್ತೇವೆ. ಈಗಾಗಲೇ ಸ್ಥಳ ಮಹಜರು ನಡೆದಿದೆ. ವೈದ್ಯಕೀಯ ಪರೀಕ್ಷೆಯೂ ನಡೆದಿದೆ ಎಂದರು.
ವೈರಲ್ ಆಗಿರುವ ಇನ್ನೊಂದು ವಿಡಿಯೋ ಬಗ್ಗೆ ಸುಮೊಟೊ ಕೇಸ್ ದಾಖಲಾಗಿದೆ. ಸಂತ್ರಸ್ತೆ ಮಹಿಳಾ ಕೇಂದ್ರದಲ್ಲಿದ್ದರು ಎಂದರು. ಕಳೆದ ರಾತ್ರಿ ಶಾಸಕರೊಬ್ಬರು ಸಂತ್ರಸ್ತೆಯ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು, ಸಾಂತ್ವನ ಕೇಂದ್ರ ನಮ್ಮ ನಿಯಂತ್ರಣದಲ್ಲಿಲ್ಲ. ಇನ್ಸ್ಪೆಕ್ಟರ್ ಭೇಟಿಗೆ ಅವಕಾಶ ಕಲ್ಪಿಸಿರುವ ಬಗ್ಗೆ ಪರಿಶೀಲನೆ ಮಾಡಿಸುತ್ತೇನೆ ಎಂದು ಎಸ್ಪಿ ಹೇಳಿದರು.
ಸಂತ್ರಸ್ತ ಮಹಿಳೆ ಯಾರನ್ನಾದರೂ ಭೇಟಿ ಮಾಡಲು ಬಯಸಿದರೆ ಅದಕ್ಕೆ ನಾವು ತೊಂದರೆ ನೀಡುವುದಿಲ್ಲ. ಸಾಂತ್ವನ ಕೇಂದ್ರಕ್ಕೆ ಮಹಿಳಾ ಅಧಿಕಾರಿಗಳನ್ನು ಹಾಕದೇ ಇರುವ ಕುರಿತಂತೆಯೂ ವಿಚಾರಿಸುತ್ತೇನೆ. ಈಗಾಗಲೇ ಉತ್ತರ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಸಂತ್ರಸ್ತೆಯ ಮನೆಗೆ ಭದ್ರತೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಆರೋಪಿಗಳು ಸದ್ಯ ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಂಡ ಬಗ್ಗೆ ಮಾಹಿತಿ ದೊರೆತಿಲ್ಲ. ಆರೋಪಿಗಳಲ್ಲಿ ಯಾರೂ ಅಪ್ರಾಪ್ತರು ಇಲ್ಲ. ಎಲ್ಲರೂ ವಯಸ್ಕರು ಎಂದರು. ಇನ್ನು, ಹಾನಗಲ್ ಪಟ್ಟಣದ ಹಿಂದೂ ಯುವತಿ ಕಿಡ್ನಾಪ್ ಬಗ್ಗೆಯೂ ಶೀಘ್ರ ಕ್ರಮ ಜರುಗಿಸುತ್ತೇವೆ ಎಂದು ಅಂಶುಕುಮಾರ್ ತಿಳಿಸಿದರು.
ಇದನ್ನೂ ಓದಿ: ಹಾವೇರಿ: ಲಾಡ್ಜ್‌ನಲ್ಲಿ ಜೋಡಿ ಮೇಲೆ ಹಲ್ಲೆ ಪ್ರಕರಣ; ಇಬ್ಬರ ಬಂಧನ, ಮೂವರಿಗಾಗಿ ಶೋಧ