ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ದತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರದ ವಿದ್ಯುನ್ಮಾನ ಮತ ಯಂತ್ರಗಳ ಎಣಿಕೆಗೆ 14 ಟೇಬಲ್ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಟೇಬಲ್‌ಗೆ ಒಬ್ಬರು ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕ ಹಾಗೂ ಒಬ್ಬ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಯಂತ್ರಗಳ ಮತ ಎಣಿಕೆಗೆ ಒಟ್ಟು 84 ಎಣಿಕೆ ಮೇಲ್ವಿಚಾರಕ, 84 ಎಣಿಕೆ ಸಹಾಯಕ ಮತ್ತು 84 ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು. ಇನ್ನು ಶನಿವಾರ ಮುಂಜಾನೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ನಡೆಸಲಾಗುವುದು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನಾಲ್ಕು ಟೇಬಲ್‌ಗಳಂತೆ ಆರು ವಿಧಾನಸಭಾ ಕ್ಷೇತ್ರಗಳಿಗೆ 24 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಸೇವಾ ಮತದಾನದಿಂದ ಸ್ವೀಕೃತವಾದ ಇಟಿಪಿಬಿಎಸ್‌ಗೆ ನಿಗದಿಪಡಿಸಲಾಗಿದೆ. ಅಂಚೆ ಮತದಾನ ಎಣಿಕೆ ನಡೆಯುವ ಪ್ರತಿ ಟೇಬಲ್‌ಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಇಬ್ಬರು ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ ಎಂದು ರಘುನಂದನಮೂರ್ತಿ ತಿಳಿಸಿದರು.
ಹಾವೇರಿಯ ಆರು ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಹಾವೇರಿ ಹೊರವಲಯದ ದೇವಗಿರಿ ಇಂಜನಿಯರಿಂಗ್ ಕಾಲೇಜಿನಲ್ಲಿ ಇರಿಸಲಾಗಿದೆ. ಈ ಕೇಂದ್ರಕ್ಕೆ ಪೊಲೀಸ್ ಸರ್ಪಗಾಹುಲು ಹಾಕಲಾಗಿದ್ದು, ಸಿಸಿಟಿವಿ ಹದ್ದಿನ ಕಣ್ಣೀಡಲಾಗಿದೆ. ಶನಿವಾರ ಮತ ಎಣಿಕೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸ್ಪಿ, ಎಎಸ್ಪಿ ಎರಡು ಕೆಎಸ್ಆರ್ಪಿ ನಿಯೋಜಿಸಲಾಗಿದೆ.
ಜೊತೆಗೆ 18 ಸಿಐಎಸ್ಎಫ್ ಹಾಪ್ ಸೆಕ್ಷನ್ ನಾಲ್ಕು ಡಿವೈಎಸ್ಪಿ, 10 ಸಿಪಿಐ, 25 ಪಿಎಸ್ಐ ಹಾಗೂ 45 ಎಎಸ್ಐಗಳನ್ನು ನಿಯೋಜಿಸಲಾಗಿದೆ. ಅಲ್ಲದೆ 220 ಪೇದೆಗಳು ಹಾಗೂ 20 ಮಹಿಳಾ ಕಾನ್ಸಟೇಬಲ್ ನಿಯೋಜನೆ ಮಾಡಲಾಗಿದೆ ಎಂದು ರಘುನಂದನಮೂರ್ತಿ ತಿಳಿಸಿದರು. ಎಲ್ಲಾ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ನಂತರ ಪ್ರತಿ ಕ್ಷೇತ್ರದ ಐದು ಮತಗಟ್ಟೆಗಳ ವಿವಿಪ್ಯಾಟ್ ಮತಗಳ ಎಣಿಕೆಯ ಟ್ಯಾಲಿ ನೋಡಲಾಗುವುದು. ವಿದ್ಯುನ್ಮಾನ ಮತಯಂತ್ರ ಕೆಟ್ಟಿದ್ದರೆ ಅದರಲ್ಲಿ ಪ್ರಿಂಟಾಗಿರುವ ಮತಗಳ ಎಣಿಕೆ ನಡೆಸಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದ ಎಣಿಕೆಗೆ ಪ್ರತ್ಯೇಕವಾಗಿ ಹೆಚ್ಚುವರಿ ಇಬ್ಬರು ಎಣಿಕೆ ಸಿಬ್ಬಂದಿ ನಿಯೋಜಿಸಲಾಗಿದೆ. ಇನ್ನು ಆರು ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಸುತ್ತುಗಳು 17 ರಿಂದ ಆರಂಭವಾಗಿ 19 ಕ್ಕೆ ಅಂತ್ಯವಾಗಲಿವೆ. ಶಿಗ್ಗಾಂವಿ ಮತ್ತು ಹಿರೇಕೆರೂರು 17 ಸುತ್ತುಗಳ ಎಣಿಕೆ ನಡೆಸಲಾಗುವದು. ಹಾನಗಲ್ ಮತ್ತು ಬ್ಯಾಡಗಿ 18 ಸುತ್ತುಗಳ ಮತ ಎಣಿಕೆ ನಡೆಸಲಾಗುವುದು. ಹಾವೇರಿ ಮತ್ತು ರಾಣೆಬೆನ್ನೂರು ಕ್ಷೇತ್ರಗಳಲ್ಲಿ 19 ಸುತ್ತುಗಳ ಮತ ಎಣಿಕೆ ನಡೆಸಲಾಗುವುದು. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಆರು ವಿಧಾನಸಭಾ ಕ್ಷೇತ್ರಗಳ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಇದನ್ನೂ ಓದಿ: ನಮ್ಮದೇ ಸರ್ಕಾರ ರಚನೆ, ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಿದ್ದೇನೆ: ಸಿಎಂ ಬೊಮ್ಮಾಯಿ