ಹಾವೇರಿ: ಏನಾದರೂ ಸಮಸ್ಯೆಯಾದರೇ ಮನುಷ್ಯ ದೇವರಿಗೆ ಪೂಜೆ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಳ್ಳುತ್ತಾನೆ. ಆದರೆ, ದೇವರಿಗೆ ಸಮಸ್ಯೆಯಾದರೇ.. ಇಂತಹ ಪ್ರಸಂಗ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕಡೂರು ಗ್ರಾಮದ ಆಂಜನೇಯನಿಗೆ ಬಂದೊದಗಿದೆ. ಗ್ರಾಮದಲ್ಲಿನ ಭಕ್ತರ ಎರಡು ಗುಂಪುಗಳು ದೇವಸ್ಥಾನ ಆಡಳಿತ ನಡೆಸಲು ಮುಂದಾಗಿವೆ. ಪರಿಣಾಮ ಎರಡು ಗುಂಪಗಳ ಮುಖ್ಯಸ್ಥರು ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ.
ಒಂದು ಗುಂಪು ದೇವಸ್ಥಾನದ ಆಡಳಿತ ಮಾಡುತ್ತಿರುವ ಇನ್ನೊಂದು ಗುಂಪು ಮನ ಬಂದಂತೆ ಆಡಳಿತ ನಡೆಸುತ್ತಿದೆ. ಗ್ರಾಮದಲ್ಲಿ ಯಾರನ್ನೂ ವಿಶ್ವಾಸಕ್ಕೆ ತಗೆದುಕೊಳ್ಳದೇ ದೇವಸ್ಥಾನ ಆದಾಯವನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದೆ. ದೇವಸ್ಥಾನಕ್ಕೆ ಸಂಬಂಧಿಸಿದ 49 ಎಕರೆ ಜಮೀನು ಇದೆ. 12 ವಾಣಿಜ್ಯ ಮಳಿಗೆಗಳಿವೆ. ಇವುಗಳನ್ನು ಗ್ರಾಮದ ಸಾಹುಕಾರ್ ಕುಟುಂಬ ತಮಗೆ ಇಚ್ಛೆ ಬಂದಂತೆ ಬೇಕಾದವರಿಗೆ ನೀಡುತ್ತಿದೆ. ಈ ಕುರಿತು ಕೇಳಲು ಹೋದವರ ಮೇಲೆ ಸುಳ್ಳು ಕೇಸ್ ಹಾಕಿ ಜೈಲು ಪಾಲುಮಾಡಿದೆ ಎಂದು ಒಂದು ಗುಂಪು ಆರೋಪಿಸುತ್ತಿದೆ.
ಅಲ್ಲದೇ ಗ್ರಾಮದ ಎಲ್ಲ ಭಕ್ತರು ಆಂಜನೇಯನನ್ನು ಪೂಜಿಸುತ್ತಾರೆ. ಭಕ್ತರ ಆದಾಯದಿಂದಲೇ ದೇವಸ್ಥಾನ ನಡೆಯುತ್ತಿದೆ. ಹೀಗಾಗಿ ದೇವಸ್ಥಾನ ಆಡಳಿತ ಮಂಡಳಿ ಮಾಡಲಿ. ಅದರಲ್ಲಿ ಎಲ್ಲ ಜಾತಿಯವರಿಗೆ ಸದಸ್ಯ ಸ್ಥಾನ ಸಿಗಲಿ ಎಂದು ಪಟ್ಟುಹಿಡಿದಿದೆ. ಈ ಗುಂಪಿನ ಜೊತೆ ಈ ಹಿಂದೆ ಪೂಜಾರಿಕೆ ಮಾಡುತ್ತಿದ್ದ ಕುಟುಂಬ ಸಹ ಸೇರಿದೆ.
ಆದರೆ ಈಗ ಪೂಜೆ ಮಾಡುತ್ತಿರುವ ಮತ್ತೊಂದು ಗುಂಪು ಹೇಳುವುದೇ ಬೇರೆ. ದೇವಸ್ಥಾನಕ್ಕೆ ಅಂತ ಒಂದು ಆಡಳಿತ ಮಂಡಳಿ ಇತ್ತು. ಅದು ಎಲ್ಲ ರೀತಿಯ ಕಾನೂನು ಪ್ರಕಾರ ಆಡಳಿತ ನಡೆಸಿದೆ. ದೇವಸ್ಥಾನದ ಆಸ್ತಿ ಲಪಟಾಯಿಸಿದ್ದರೆ ಪರೀಕ್ಷಿಸಲಿ, ದೇವಸ್ಥಾನದ ಆದಾಯದ ಅಡಿಟ್ ಸಹ ಮಾಡಲಾಗಿದೆ.
ಇನ್ನೊಂದು ಗುಂಪಿಗೆ ಇದೆಲ್ಲ ಬೇಕಾಗಿಲ್ಲ ಬದಲಿಗೆ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಸಂಬಂಧ 32 ಜನರ ಮೇಲೆ ಜಾತಿನಿಂದನೆ ದೂರು ಸಹ ದಾಖಲಿಸಿದ್ದಾರೆ. ಈಗಾಗಲೇ ದೇವಸ್ಥಾನ ಮುಜರಾಯಿ ಇಲಾಖೆಯ ಬಿ ಗ್ರೇಡ್ ಪಟ್ಟಿಯಲ್ಲಿದೆ. ಎರಡು ಗುಂಪುಗಳು ಇದೀಗ ನ್ಯಾಯಾಲಯದ ಮೆಟ್ಟಿಲೇರಿವೆ. ದೇವಸ್ಥಾನಕ್ಕೆ ಬೀಗ ಹಾಕಲಾಗಿತ್ತು ಭಕ್ತರು ದೂರದಿಂದಲೇ ಆಂಜನೇಯ ದರ್ಶನ ಪಡೆಯುತ್ತಿದ್ದಾರೆ.
ಕಳೆದ ಕೆಲ ತಿಂಗಳಿಂದ ಬಾಗಿಲು ತೆರೆಯದೇ ಆಂಜನೇಯನ ಪೂಜೆ ಸಹ ಆಗಿಲ್ಲ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಗಾದೆ ಮಾತಂತೆ ಭಕ್ತರ ನಡುವಿನ ಭಿನ್ನಾಭಿಪ್ರಾಯ ಆಂಜನೇಯನಿಗೆ ಪೂಜೆ ಇಲ್ಲದಂತೆ ಮಾಡಿದೆ. ನ್ಯಾಯಾಲಯದ ಆದೇಶದ ನಂತರವಾದರೂ ಎರಡು ಗುಂಪುಗಳೇ ಸೇರಿ ದೇವಸ್ಥಾನದ ಆಡಳಿತ ಸುಸೂತ್ರವಾಗಿ ನಡೆಸಿಕೊಂಡು ಹೋಗಲಿವೆಯಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.
ಇದನ್ನೂ ಓದಿ : ತಿರುಮಲನ ಆವರಣದಲ್ಲಿ ಪಾದರಕ್ಷೆ ಹಾಕಿ ಫೋಟೋಶೂಟ್.. ಕ್ಷಮೆಯಾಚಿಸಿದ ನಯನತಾರ - ವಿಘ್ನೇಶ್ ದಂಪತಿ!