ರಾಣೆಬೆನ್ನೂರು: ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ ರಾಣೆಬೆನ್ನೂರು ನಗರದಲ್ಲಿ ಹಾಲುಮತ ಮಹಾಸಭಾ ಮತ್ತು ಕರ್ನಾಟಕ ಕುರುಬರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ತಹಶೀಲ್ದಾರ್ ಕಚೇರಿ ಆವರಣದ ಮುಂದೆ ಸಂಗೊಳ್ಳಿ ರಾಯಣ್ಣ ಯುವಕರ ಸಂಘದ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಸೇರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಯುವ ಮುಖಂಡ ಮತ್ತಣ್ಣ ಗುದಿಗೇರ ಮಾತನಾಡಿ, ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ಪ್ರಾಣ ಬಿಟ್ಟ ಹುತಾತ್ಮ ಹೋರಾಟಗಾರ. ಇಂತಹ ವೀರ ಪುರುಷನ ಪ್ರತಿಮೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಅನುಮತಿ ನೀಡುತ್ತಿಲ್ಲ. ಅಲ್ಲದೆ ಸ್ವಾತಂತ್ರ್ಯ ಸಿಕ್ಕ ದಿನವಾದ ಅಗಸ್ಟ್ 15ರಂದು ಬೆಳಗಾವಿಯ ಪೀರನವಾಡಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಏಕಾಏಕಿ ಪೊಲೀಸರು ತೆಗೆದು ಹಾಕಿದ್ದಾರೆ. ಇದನ್ನು ವಿರೋಧಿಸಿದ ಸ್ಥಳೀಯರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರವು ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗೌರವ ಸಲ್ಲಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.