ರಾಣೆಬೆನ್ನೂರು: ಎಸ್ಸಿ ಪಟ್ಟಿಯಿಂದ ಲಂಬಾಣಿ, ಕೊರಮ, ಕೊರಚ, ಜಾತಿಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ನಗರದಲ್ಲಿ ಪಂಚ ಸಮುದಾಯದ ವತಿಯಿಂದ ಪತ್ರ ಚಳುವಳಿ ನಡೆಸಲಾಯಿತು.
ನಗರದ ಅಂಚೆ ಕಚೇರಿಯ ಮುಂಭಾಗ ಮಾದಿಗ, ಚಲವಾದಿ, ಸಮಗಾರ ಜಾತಿಯ ನೂರಾರು ಜನರು ಮುಖ್ಯಮಂತ್ರಿಗಳಿಗೆ ತಮ್ಮ ನೋವುಗಳನ್ನು ಪತ್ರದಲ್ಲಿ ಬರೆದು ತಿಳಿಸಿದರು.
ಸಮುದಾಯದ ಯುವ ಮುಖಂಡ ಹನುಮಂತ ಕಬ್ಬಾರ ಮಾತನಾಡಿ, ಎಸ್ಸಿ ಸಮುದಾಯದಲ್ಲಿ ಸ್ಪರ್ಶ ವರ್ಗಗಳಾದ ಕೊರಮ, ಕೊರಚ, ಲಂಬಾಣಿ ಜನರು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸದೃಢವಾಗಿವೆ. ಎಸ್ಸಿ ಸಮುದಾಯದ ಎಲ್ಲಾ ಸವಲತ್ತುಗಳನ್ನು ಐದು ಜಾತಿಗಳು ಪಡೆಯುತ್ತಿವೆ. ಇದರಿಂದ ಚಲವಾದಿ, ಮಾದಿಗ, ಸಮಗಾರ, ಡೋಹರ, ಮಚಗಾರ ಸಮುದಾಯಗಳು ತಲೆತಲಾಂತರಗಳಿಂದ ತೀವ್ರ ಅನ್ಯಾಯಗಳನ್ನು ಎದುರಿಸುತ್ತಾ ಬಂದಿವೆ ಎಂದರು.
ಈಗ ಸುಪ್ರೀಂಕೋರ್ಟ್ ನಿರ್ದೆಶನದಂತೆ ರಾಜ್ಯದಲ್ಲಿ ಐದು ಜಾತಿಗಳನ್ನು ಪರಿಶೀಲಿಸಿ ಸರ್ಕಾರ ಎಸ್ಸಿ ಪಟ್ಟಿಯಿಂದ ಈ ಜಾತಿಗಳನ್ನು ಬಿಡಬೇಕು. ಒಂದು ವೇಳೆ ರಾಜ್ಯ ಸರ್ಕಾರ ಈ ಜಾತಿಗಳನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.