ಹಾವೇರಿ: ಜಿಲ್ಲಾ ಪಂಚಾಯತ್ ಪೈಪ್ ಸಾಗಣಿಕ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ಜಿ. ಪಂ. ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಅವರು ಕನವಳ್ಳಿ ರೈತರನ್ನ ಕಳ್ಳರು ಎಂದು ಕರೆದಿದ್ದಾರೆ ಎಂದು ಆರೋಪಿಸಿ ನಗರದಲ್ಲಿಂದು ಕನವಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯತ್ ಹಳೇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕನವಳ್ಳಿ ಕೆರೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ನೀರು ಒದಗಿಸುತ್ತದೆ. ಇಲ್ಲಿ ನೀರಿನ ಸಮಸ್ಯೆ ಇರುವುದರಿಂದ ನಾವು ಶಾಸಕರಿಗೆ ಮನವಿ ಸಲ್ಲಿಸಿದ್ದೆವು. ಅದರಂತೆ ಶಾಸಕರು ಜಿಲ್ಲಾ ಪಂಚಾಯತ್ ಅಧಿಕಾರಿಗಳ ಜೊತೆ ಚರ್ಚಿಸಿ ಪೈಪ್ ನೀಡಿದ್ದಾರೆ.
ಆದರೆ, ಅದೇ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಇದೊಂದು ಕಳ್ಳತನ ಎಂದು ಆರೋಪಿಸಿರುವುದು ತಮಗೆ ನೋವು ತಂದಿದೆ ಎಂದು ಗ್ರಾಮಸ್ಥರು ಹೇಳಿದರು. ಈ ಕೂಡಲೇ ಕೊಟ್ರೇಶಪ್ಪ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕ್ಷಮೆ ಕೇಳುವವರೆಗೂ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಪಟ್ಟು ಹಿಡಿದು ಕುಳಿತಿದ್ದರು.