ಹಾವೇರಿ : ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಷ್ಠೆಯ ಕಣವಾಗಿರುವ ಹಾನಗಲ್ ವಿಧಾನಸಭಾ ಉಪಚುನಾವಣೆಯ ಮತಎಣಿಕೆ ನಾಳೆ ನಡೆಯಲಿದೆ. ಮತ ಎಣಿಕೆಗೆ ಹಾವೇರಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ್ ತಿಳಿಸಿದ್ದಾರೆ.
ಹಾವೇರಿ ಸಮೀಪದ ದೇವಗಿರಿ ಹೊರವಲಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತಎಣಿಕೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಬೆಳಗ್ಗೆ 7 ಗಂಟೆ 30 ನಿಮಿಷಕ್ಕೆ ಸ್ಟ್ರಾಂಗ್ ರೋಮ್ ಓಪನ್ ಮಾಡಲಾಗುತ್ತದೆ.
ಮೊದಲು ಅಂಚೆ ಮತ್ತು ಸೇವಾ ಮತಎಣಿಕೆ ಮಾಡಲಾಗುತ್ತದೆ. ಮತ ಎಣಿಕೆಗೆ ಎರಡು ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್ ಹಾಕಲಾಗಿದೆ ಎಂದಿದ್ದಾರೆ.
ಪ್ರತಿ ಟೇಬಲ್‌ಗೆ ಒಬ್ಬರು ಸೂಕ್ಷ್ಮ ಮೇಲ್ವಿಚಾರಕರು ಮತ್ತು ಒಬ್ಬರು ಮತಎಣಿಕೆ ಮೇಲ್ವಿಚಾರಕ ಹಾಗೂ ಎಣಿಕೆ ಸಹಾಯಕರನ್ನ ನಿಯೋಜಿಸಲಾಗಿದೆ. ಒಟ್ಟು 18 ಸುತ್ತಿನ ಮತಎಣಿಕೆ ನಡೆಯಲಿದೆ. 19ನೇ ಸುತ್ತು ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮತಎಣಿಕೆಗೆ ಪೊಲೀಸ್ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಯಾವುದೇ ವಿಜಯೋತ್ಸವ, ಮೆರವಣಿಗೆ ನಡೆಸುವಂತಿಲ್ಲ. ಶಾಂತಿ ಸುವ್ಯವಸ್ಥೆಗಾಗಿ 5 ಮಂದಿ ಡಿವೈಎಸ್ಪಿ ಸೇರಿದಂತೆ ಪ್ಯಾರಾ ಮಿಲಿಟರಿ, ರಿಸರ್ವ್ ಪೊಲೀಸ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಚುನಾವಣಾ ಅಖಾಡದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಶಿವರಾಜ್ ಸಜ್ಜನರ್, ಕಾಂಗ್ರೆಸ್ನ ಶ್ರೀನಿವಾಸ ಮಾನೆ ಮತ್ತು ಜೆಡಿಎಸ್‌ನ ನಿಯಾಜ್ ಶೇಖ್ ಸೇರಿದಂತೆ 13 ಅಭ್ಯರ್ಥಿಗಳಿದ್ದಾರೆ. ನಾಳೆ ಮಧ್ಯಾಹ್ನದ ವೇಳೆ ಫಲಿತಾಂಶ ತಿಳಿದು ಬರಲಿದೆ. ವಿಜಯಮಾಲೆ ಯಾರ ಕೊರಳಿಗೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಪುನೀತ್ ಕುಟುಂಬಸ್ಥರನ್ನು ಭೇಟಿಯಾಗಿ, ಸಾಂತ್ವನ ಹೇಳಿದ ತಮಿಳು ನಟ ಶಿವಕಾರ್ತಿಕೇಯನ್