ರಾಣೆಬೆನ್ನೂರು (ಹಾವೇರಿ): ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ ಎಂದು ರಾಣೆಬೆನ್ನೂರು ತಾಲೂಕಿನ ಶರಣಬಸವೇಶ್ವರ ಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.
ಈ ಕುರಿತು ವಿಡಿಯೋ ಮಾಡಿ ಹರಿಬಿಟ್ಟಿರುವ ಅವರು, ಸಿಡಿಯಲ್ಲಿರುವ ಸಂತ್ರಸ್ತೆ ಈವರೆಗೂ ಕೂಡ ಯಾವುದೇ ಪ್ರಕರಣ ದಾಖಲು ಮಾಡಿಲ್ಲ. ಆದರೆ ಮೂರನೇ ವ್ಯಕ್ತಿಗಳಿಂದ ಇದು ನಡೆಯುತ್ತಿರುವುದನ್ನು ನೋಡಿದರೆ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಜಾರಕಿಹೊಳಿ ಕುಟುಂಬ ಕಳೆದ ಇಪ್ಪತ್ತು ವರ್ಷಗಳಿಂದ ಜನ ಸೇವೆಯಲ್ಲಿರುವ ಸುಸಂಸ್ಕೃತ ಕುಟುಂಬ. ಅಂತಹ ಕುಟುಂಬದ ಮೇಲೆ ಇಂತಹ ಆರೋಪ ಮಾಡಿದ್ದಾರೆ ಎಂಬದನ್ನು ನಂಬಲಾಗುತ್ತಿಲ್ಲ. ರಮೇಶ್ ಜಾರಕಿಹೊಳಿಯವರನ್ನು ಟಾರ್ಗೆಟ್ ಮಾಡಿ ಅವರನ್ನು ರಾಜೀನಾಮೆ ನೀಡುವಂತೆ ಮಾಡಲಾಗಿದೆ. ಈ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಸಿಒಡಿ ಅಥವಾ ಸಿಬಿಐಗೆ ನೀಡಬೇಕು ಎಂದು ಮನವಿ ಮಾಡಿದರು.
ಹಿಂದುಳಿದ ವರ್ಗದ ವ್ಯಕ್ತಿಯಾಗಿರುವ ಜಾರಕಿಹೊಳಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ ಎಂಬ ಕಾರಣದಿಂದ ಈ ಸಿಡಿ ಬಿಡುಗಡೆ ಮಾಡಲಾಗಿದೆ. ತನಿಖೆ ಮಾಡಿದ ನಂತರ ಇದರ ಸತ್ಯಾಸತ್ಯತೆ ತಿಳಿಯಲಿದ್ದು, ಅವರ ನಿರ್ದೋಷಿಯಾಗಿ ಬರುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.