ಹಾವೇರಿ: ಹರ್ ಘರ್ ತಿರಂಗಾ ಅಭಿಯಾನವನ್ನು ಯಾರು ವಿರೋಧ ಮಾಡುತ್ತಿದ್ದರೋ, ಇಂದು ಅವರೇ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುವ ಪರಿಸ್ಥಿತಿ ಬಂದಿದೆ. ಮೂರುವರೇ ಕೋಟಿ ಜನರು ಪ್ರಾಣತ್ಯಾಗ ಮಾಡಿರುವ ಅಂದಾಜಿದೆ. ಅದೆಲ್ಲವನ್ನು ನೆನಪಿಸಬೇಕು, ದೇಶವನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿ, ಜಗತ್ತಿನಲ್ಲಿ ಭಾರತ ಒಂದು ಹಿರಿಯಣ್ಣನಂತೆ ಆಗಬೇಕು ಅನ್ನೋ ಕಾರಣಕ್ಕೆ ಮೋದಿಯವರ ಕರೆಯಂತೆ ಈ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ನಡೆದ ಬೈಕ್ ರ್ಯಾಲಿಗೆ ಅವರು ಚಾಲನೆ ನೀಡಿದರು. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸ್ವಾತಂತ್ರ್ಯದ ವಿಚಾರದಲ್ಲಿ ಕಾಂಗ್ರೆಸ್ನವರು ರಾಜಕೀಯ ಮಾಡಬಾರದಿತ್ತು. ಸ್ವಾತಂತ್ರ್ಯ ಹೋರಾಟ ನಮ್ಮದು ಎಂದು ಹೇಳಲು ಕಾಂಗ್ರೆಸ್ನವರಿಗೆ ಅರ್ಹತೆ, ನೈತಿಕತೆ, ಅಧಿಕಾರ ಇಲ್ಲ ಎಂದು ಕಿಡಿಕಾರಿದರು.
ಈಗಿನ ಕಾಂಗ್ರೆಸ್ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಮಹಾತ್ಮ ಗಾಂಧೀಜಿಯವರ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಈಗಿನದು ಡುಪ್ಲಿಕೇಟ್ ಕಾಂಗ್ರೆಸ್, ಈಗಿನವರು ನಕಲಿ ಗಾಂಧಿವಾದಿಗಳು. ಇದು ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಅಲ್ಲ. ಇಂದಿರಾ ಕಾಂಗ್ರೆಸ್ ಎಂದು ಕೇಂದ್ರ ಸಚಿವ ಜೋಶಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸಾವರ್ಕರ್ ಅವರಿಗೆ ಅಪಮಾನ ಮಾಡಿರುವುದು ಖಂಡನೀಯ: ಬಿ ವೈ ರಾಘವೇಂದ್ರ