ಹಾವೇರಿ: ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಕುರಿತಂತೆ ಪಂಚಮಸಾಲಿಪೀಠ ಶ್ರೀಗಳು ಮತ್ತೆ ಗಡುವು ನೀಡಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಆಗಸ್ಟ್ 22 ರ ಒಳಗೆ ಮೀಸಲಾತಿ ಘೋಷಿಸಬೇಕು. ಒಂದು ವೇಳೆ ಘೋಷಣೆಯಾದರೆ 23 ರಂದು ಜಿಲ್ಲೆಯ ಶಿಗ್ಗಾಂವಿಯಲ್ಲಿ ಸಿಎಂಗೆ ಸತ್ಕಾರ ಮಾಡುತ್ತೇವೆ. ಇಲ್ಲದಿದ್ದರೆ ಅಲ್ಲಿಯೇ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ವಿಷಯವಾಗಿ ಜೂನ್ 27ರಂದು ಶಿಗ್ಗಾಂವಿ ಪಟ್ಟಣದ ಸಿಎಂ ನಿವಾಸದ ಮುಂದೆ ಹೋರಾಟ ಮಾಡಲು ನಿರ್ಧರಿಸಲಾಗಿತ್ತು. ಆಗ ಸಮಾಜದವರೇ ಆದ ಸಚಿವ ಸಿ.ಸಿ.ಪಾಟೀಲರ ಮನವಿ ಮೇರೆಗೆ ಹೋರಾಟ ಸಮಿತಿ ಮುಖಂಡರು ಸಭೆ ಮಾಡಿದ್ದರು. ಈ ಸಭೆಯಲ್ಲಿ ಸಿಎಂ ಹೋರಾಟ ಸಮಿತಿ ಮುಖಂಡರ ಬಳಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದರು. ಹೀಗಾಗಿ ಸಚಿವ ಸಿ.ಸಿ.ಪಾಟೀಲ ಮತ್ತು ಯತ್ನಾಳರ ಮೇಲೆ ಭರವಸೆ ಇಟ್ಟು ಸಿಎಂ ನಿವಾಸದ ಮುಂದಿನ ಹೋರಾಟ ತಾತ್ಕಾಲಿಕವಾಗಿ ಹಿಂಪಡೆದಿದ್ದೆವು ಎಂದು ಶ್ರೀಗಳು ತಿಳಿಸಿದರು.
ಸಿಎಂ ಮಾತು ತಪ್ಪಬಾರದು: ಸಿಎಂ ನೀಡಿದ ಕಾಲಾವಕಾಶ ಆಗಸ್ಟ್ 22ಕ್ಕೆ ಮುಕ್ತಾಯ ಆಗುತ್ತದೆ. ಮೊನ್ನೆ ಸಿಎಂ ಬೊಮ್ಮಾಯಿಯವರು ಶಾಸಕ ಬಸನಗೌಡ ಪಾಟೀಲ ಯತ್ನಾಳರ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಬೊಮ್ಮಾಯಿಯವರು ಪದೇ ಪದೆ ಮಾತು ತಪ್ಪಬಾರದು. ನಿಮ್ಮ ಮೇಲೆ ಭರವಸೆ ಇಟ್ಟಿದ್ದೇವೆ ಎಂದು ಹೇಳಿದರು.
ಶ್ರೀಗಳ ಮನವಿ: ಆಗಸ್ಟ್ 22ಕ್ಕೆ ಇನ್ನೂ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ಆಗಸ್ಟ್ 22ರ ಮಧ್ಯರಾತ್ರಿವರೆಗೂ ನಿಮ್ಮಿಂದ ಸಿಹಿಸುದ್ದಿಗಾಗಿ ಕಾಯುತ್ತೇವೆ. ಮೀಸಲಾತಿ ಘೋಷಿಸಿ ನಂಬಿಕೆ ಉಳಿಸಿಕೊಳ್ಳುವಂತೆ ಸಿಎಂಗೆ ಶ್ರೀಗಳು ಒತ್ತಾಯ ಮಾಡಿದರು. ಸಂಘ ಪರಿವಾರದವರು, ಕೇಂದ್ರ ಸಚಿವರನ್ನೂ ಭೇಟಿ ಆಗಿದ್ದು, ಅವರೂ ಬೆಂಬಲ ನೀಡಿದ್ದಾರೆ. ಹೀಗಿದ್ದಾಗ ಮೀಸಲಾತಿ ಘೋಷಣೆಗೆ ವಿಳಂಬ ಮಾಡಬೇಡಿ ಎಂದು ಬಸವಜಯ ಮೃತ್ಯುಂಜಯ ಶ್ರೀ ಮನವಿ ಮಾಡಿದರು.
ಬಸವಜಯ ಮೃತ್ಯುಂಜಯ ಶ್ರೀ ಕರೆ: ಆಗಸ್ಟ್ 22ರಂದು ಮೀಸಲಾತಿ ಘೋಷಣೆ ಮಾಡಿದ್ರೆ, ಆಗಸ್ಟ್ 23ಕ್ಕೆ ಶಿಗ್ಗಾಂವಿ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಸಿಎಂಗೆ ಬೃಹತ್ ಅಭಿನಂದನೆ ಸಲ್ಲಿಸುತ್ತೇವೆ. ಇಲ್ಲದಿದ್ದರೆ ಚೆನ್ನಮ್ಮ ವೃತ್ತದ ಬಳಿ ಕುಳಿತುಕೊಂಡು ಮುಂದಿನ ಹೋರಾಟ ಎಂದು ಶ್ರೀಗಳು ಎಚ್ಚರಿಕೆ ನೀಡಿದರು. ಸಿಎಂಗೆ ಸನ್ಮಾನ ಇಲ್ಲವೇ ಹೋರಾಟ ಎರಡಕ್ಕೂ ಸಜ್ಜಾಗಿ ಶಿಗ್ಗಾಂವಿ ಪಟ್ಟಣಕ್ಕೆ ಬರುವಂತೆ ಸಮಾಜ ಬಾಂಧವರಿಗೆ ಸ್ವಾಮೀಜಿ ಕರೆ ನೀಡಿದರು.
ತಪ್ಪಿತಸ್ಥರನ್ನು ಪತ್ತೆಹಚ್ಚಿ ಶಿಕ್ಷಿಸುವಂತೆ ಒತ್ತಾಯ: ನಮ್ಮ ಸಮಾಜದ ಶಾಂತಿ, ಸಮಾಧಾನ, ತಾಳ್ಮೆ ಪರೀಕ್ಷೆ ಮಾಡಬೇಡಿ. ಇದೇ ವೇಳೆ ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಹೆಸರಿಗೆ ಮಾಡಿದ ಅವಮಾನವನ್ನು ಸಹಿಸುವುದಿಲ್ಲ. ಸರ್ಕಾರ ಈ ಕೂಡಲೇ ತಪ್ಪಿತಸ್ಥರನ್ನು ಪತ್ತೆಹಚ್ಚಿ ಶಿಕ್ಷಿಸುವಂತೆ ಒತ್ತಾಯಿಸಿದರು. ವಾಲ್ಮೀಕಿ ಸಮಾಜ, ಪಂಚಮಸಾಲಿ ಸಮಾಜ, ಹಾಲುಮತ ಸಮಾಜ ಮೂರು ಸಮಾಜಗಳು ಸರ್ಕಾರ ಬರಲು ಆಶೀರ್ವಾದ ಮಾಡಿವೆ ಎಂದು ಶ್ರೀಗಳು ತಿಳಿಸಿದರು.
ಇದನ್ನೂ ಓದಿ: ಪಂಚಮಸಾಲಿ 2ಎ ಮೀಸಲಾತಿ ವಿವಾದ: ಸಿಎಂ ಸಂಧಾನ ಸಫಲ, ಹೋರಾಟ ಕೈಬಿಡಲು ನಿರ್ಧಾರ
ವಾಲ್ಮೀಕಿ ಸಮಾಜ, ಹಾಲುಮತ ಸಮಾಜ ಮತ್ತು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಬೇಕು. ಮೂರೂ ಸಮಾಜಗಳು ರಾಜ್ಯದಲ್ಲಿ ಪ್ರಬಲ ಸಮುದಾಯಗಳು. ಮೂರು ಸಮಾಜಕ್ಕೆ ನ್ಯಾಯ ಕೊಡಬೇಕು. ಸಿಎಂ ಬೊಮ್ಮಾಯಿ ಅವರಿಗೆ ಸಮಾಜಕ್ಕೆ ಮೀಸಲಾತಿ ಕೊಡುವ ಮನಸ್ಸಿದೆ. ಅವರಿಗೆ ಒಳಗಡೆ ಯಾರೋ ಒತ್ತಡ ಹಾಕುತ್ತಿದ್ದಾರೆ ಎಂದು ಶ್ರೀಗಳು ಅನುಮಾನ ವ್ಯಕ್ತಪಡಿಸಿದರು.