ಹಾವೇರಿ: ಈ ದೇಹ ಮಣ್ಣಲ್ಲಿ ಮಣ್ಣಾಗಿ ಹೋದರು ಜೀವ ಪಂಚಮಸಾಲಿ ಸಮಾಜದ ಏಳಿಗೆಗೆ ಮೀಸಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಶ್ರೀಗಳು ತಿಳಿಸಿದರು.
ಜಿಲ್ಲೆಯ ಹಾನಗಲ್‌ನಲ್ಲಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಅಕ್ಟೋಬರ್ 1 ರವರೆಗೆ ಕಾಲಾವಕಾಶ ನೀಡಲಾಗಿದೆ. ಅಕ್ಟೋಬರ್ 1 ರಂದು ಸಮಾಜದವರು ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ಬರಬೇಕು. ಮೀಸಲಾತಿ ನೀಡಿದ್ರೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು. ನೀಡದಿದ್ದರೆ ಅಲ್ಲಿಂದಲೇ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಶ್ರೀಗಳು ಎಚ್ಚರಿಕೆ ನೀಡಿದರು.
ಶಾಸಕ ಬಸನಗೌಡ ಪಾಟೀಲ್ (ಯತ್ನಾಳ್), ಮಾಜಿ ಶಾಸಕರಾದ ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್ ಪಂಚಮಸಾಲಿ ಸಮಾಜದ ಹುಲಿಗಳು. ನಮ್ಮ ಸಮಾಜದ ಬಗ್ಗೆ ಹೋರಾಟ ಮಾಡುವ ಮುಖಂಡರೇ ನಮ್ಮ ನಾಯಕರು ಎಂದು ಶ್ರೀಗಳು ಘೋಷಿಸಿದರು.
ಮುಂದಿನ ಮುಖ್ಯಮಂತ್ರಿ ಯತ್ನಾಳ್ :
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ಯತ್ನಾಳ್ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕೆ ಅವರನ್ನು ಹತ್ತಿಕ್ಕುವ ಯತ್ನ ನಡೆದಿದೆ. ಯತ್ನಾಳ್ ಸಚಿವರಷ್ಟೇ ಅಲ್ಲದೇ, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭವಿಷ್ಯ ನುಡಿದರು.