ಹಾವೇರಿ : ಬೆಲೆ ಏರಿಕೆ ಹೆಚ್ಚಳವಾಗಿದೆ. ನರೇಂದ್ರ ಮೋದಿ ಬಡವರು, ರೈತರು ಹಾಗೂ ಕೂಲಿ ಕಾರ್ಮಿಕರ ರಕ್ತ ಕುಡಿಯುತ್ತಿದ್ದಾರೆ. ಮೋದಿ ಬರೀ ಸುಳ್ಳು ಹೇಳುತ್ತಾರೆ. ಇಂತಹ ಕೆಟ್ಟ ಸರ್ಕಾರ ಇರಬೇಕೇನ್ರೀ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಹಾನಗಲ್ ಉಪಚುನಾವಣೆ ಹಿನ್ನೆಲೆ ತಾಲೂಕಿನ ಮಾರನಬೀಡ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಶಿವರಾಜ ಸಜ್ಜನರ್ ಶಾಸಕನಾಗಬಾರದು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನಮ್ಮ ನರೇಂದ್ರ ಮೋದಿಯಂತಹ ಪ್ರಧಾನಿ ಈವರೆಗೆ ಬಂದಿಲ್ಲ ಎಂದು ಹೇಳುತ್ತಾರೆ. ಅವರು ಈಗ ತಿರುಪತಿ ತಿಮ್ಮಪ್ಪನ ನಾಮ ಹಾಕಿದ್ದಾರೆ. ನಾನು ಯಾವಾಗಲೂ ಸತ್ಯವನ್ನೇ ಮಾತನಾಡುವುದು. ಯಾವುದೇ ಕಾರಣಕ್ಕೂ ಶಿವರಾಜ ಸಜ್ಜನರ್ ಶಾಸಕನಾಗಬಾರದು. ಗೋಣಿ ಚೀಲವನ್ನೂ ಬಿಡದ ವ್ಯಕ್ತಿ. ಇಂತವರು ಶಾಸಕರಾಗಬೇಕಾ? ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ ಕೃಪಕಟಾಕ್ಷದಿಂದ ಬೊಮ್ಮಾಯಿ ಸಿಎಂ : ಈ ಬೊಮ್ಮಾಯಿ ಜನರಿಂದ ವೋಟ್ ತೆಗೆದುಕೊಂಡು ಸಿಎಂ ಆಗಿದ್ದರಾ?. ಆರ್ಎಸ್ಎಸ್ ಕೃಪಾಕಟಾಕ್ಷದಿಂದ ಸಿಎಂ ಆಗಿದ್ದಾರೆ. ಅವರೇನು ಅಭಿವೃಧಿ ಮಾಡಿಲ್ಲ. ಅದಕ್ಕೆ ನಾನು ಚರ್ಚೆ ಮಾಡಲು ಒಂದೇ ವೇದಿಕೆಗೆ ಕರೆದೆ. ಬೊಮ್ಮಾಯಿಗೆ ಒಂದೇ ವೇದಿಕೆಗೆ ಬರಲು ಧೈರ್ಯ ಇಲ್ಲ. ಯಾಕೆಂದರೆ, ನನ್ನ ಎದುರು ಸುಳ್ಳು ಹೇಳೋಕೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
ನನ್ನ ಯೋಜನೆ ಜನರಿಗೆ ತಲುಪಿಲ್ಲ ಎಂದು ಹೇಳಿದರು. ನೀವೇ ಹೇಳಿ.. ನಾನು ಕೊಟ್ಟಿರುವ 7 ಕೆಜಿ ಅಕ್ಕಿ ನಿಮಗೆ ತಲುಪಿಲ್ಲವಾ?. ಏಳೂವರೆ ಸಾವಿರ ಮನೆ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ, ಒಂದೂ ಮನೆ ಮಂಜೂರು ಮಾಡಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಬಿಎಸ್ವೈ ಇನ್ನೂ 50 ವರ್ಷ ಕಾಂಗ್ರೆಸ್ ಬರಲ್ಲ ಅಂತಾರೆ. ನಿಮ್ಮನ್ನ ನಿರ್ದಯವಾಗಿ ಕೆಳಗೆ ಇಳಿಸಿದಾಗ ಯಾಕೆ? ಮಾತನಾಡಲಿಲ್ಲ. ಬಿಜೆಪಿಯವರು ಬಿಎಸ್ವೈಗೆ ನಿಮ್ಮ ವಿರುದ್ಧ ಇಡಿ, ಆದಾಯ ತೆರಿಗೆ ಬಿಟ್ಟು ತನಿಖೆ ಮಾಡಿಸುತ್ತೇವೆ ಎಂದು ಹೆದರಿಸಿದ್ದಾರೆ ಎಂದು ಟಾಂಗ್ ನೀಡಿದರು.
ವ್ಯಕ್ತಿಯೊಬ್ಬನಿಗೆ ತರಾಟೆಗೆ ತಗೆದುಕೊಂಡ ಸಿದ್ದರಾಮಯ್ಯ : ಕುಡಿದು ಬಂದು ಗಲಾಟೆ ಮಾಡಬೇಡ. ಬಿಜೆಪಿಯವರು ಕುಡಿಸಿ ಕಳುಹಿಸಿದ್ರಾ? ಎಂದು ಸಿದ್ದರಾಮಯ್ಯ ಭಾಷಣದ ಮಧ್ಯೆ ಮಾತನಾಡಿದ ವ್ಯಕ್ತಿಯೊಬ್ಬನಿಗೆ ತರಾಟೆಗೆ ತಗೆದುಕೊಂಡರು.
ಇದನ್ನೂ ಓದಿ: ಬಿಜೆಪಿ ಸರ್ಕಾರ ಬರೋದಕ್ಕೆ ಸಿದ್ದರಾಮಯ್ಯ ಕಾರಣ.. ಮಾಜಿ ಸಿಎಂ ಹೆಚ್‌ಡಿಕೆ ಆರೋಪ