ಹಾವೇರಿ : ಜಿಲ್ಲೆ ಶಿಗ್ಗಾಂವಿ ತಾಲೂಕಿನ ಮುಗಳೀಕಟ್ಟಿ ಗ್ರಾಮದ 90 ವರ್ಷದ ವೃದ್ಧೆ ಕರೆವ್ವಾ ಮಾದರ. ಕರೆವ್ವಾ ಮಾದರ ಇದೀಗ ನೆರವಿಗಾಗಿ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಕರೆವ್ವಾಳ ಸಂಬಂಧಿಕರು ಎಂದು ಯಾರು ಇಲ್ಲ. ಹುಟ್ಟಿದ ಎರಡು ಮಕ್ಕಳು ಆಸುನೀಗಿದ್ದು, ಪತಿ ತೀರಿಕೊಂಡಿದ್ದಾರೆ. ಈಗ ಕರೆವ್ವಾ ಮುಗಳೀಕಟ್ಟಿ ಗ್ರಾಮದ ಖಾಜಾ ಮೋಹಿದ್ದಿನ್ ಆಸರೆಯಲ್ಲಿದ್ದಾರೆ.
ಕರೆವ್ವಾ ಮಾದರಗೆ ಒಂದು ಎಕರೆ 20 ಗುಂಟೆ ಜಮೀನಿದ್ದು, ಇದನ್ನು ಒಳ ಹಾಕಲು ಆ ಊರಿನ ಮಾದರ ಸಮುದಾಯದವರು ಆಕೆಯನ್ನು ಎಳೆದಾಡಿದ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಇದಾದ ನಂತರ ಖಾಜಾ ಮೋಹಿದ್ದಿನ್ ಕರೆವ್ವಾ ಮಾದರ್‌ಗೆ ಆಸರೆ ನೀಡಿದ್ದಾರೆ. ಆದರೆ, ಕರೆವ್ವಾ ಈ ರೀತಿ ಮುಸ್ಲಿಂ ವ್ಯಕ್ತಿಯ ಆಸರೆ ಪಡೆದಿದ್ದು ಸ್ವಸಮಾಜದವರಿಗೆ ಇಷ್ಟ ಇಲ್ಲ. ಪರಿಣಾಮ ಸಮಾಜದವರು ಕರೆವ್ವಾಳಿಗೆ ಮುಸ್ಲಿಂ ವ್ಯಕ್ತಿಯ ಆಸರೆಯಿಂದ ಹೊರಗೆ ಬಾ ಎಂದು ಪೀಡಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾಳೆ.
ಅಷ್ಟೇ ಅಲ್ಲದೇ ಕೆಲವು ಬಾರಿ ಮನೆಯ ಮುಂದೆ ಬಂದ ನನ್ನನ್ನ ಅಪಹರಣ ಸಹ ಮಾಡಿದ್ದರು ಎಂದು ಕರೆವ್ವಾ ತಿಳಿಸಿದ್ದಾರೆ. ಖಾಜಾ ಮೋಹಿದ್ದಿನ್ ತಂದೆ ಕಾಲದಿಂದ ಕರೆವ್ವಾ ಅವರ ಮನೆಯಲಿ ವಾಸ ಮಾಡುತ್ತಿದ್ದಾರಂತೆ. ಕರೆವ್ವಾಗೆ ಚಿಕನ್ ಗುನ್ಯಾ ಆಗಲಿ ಯಾವುದೇ ಆರೋಗ್ಯ ಸಮಸ್ಯೆಯಾಗಲಿ ಖಾಜಾ ಮೋಹಿದ್ದಿನ್ ಮುಂದೆ ನಿಂತು ಆಸ್ಪತ್ರೆಗೆ ತೋರಿಸಿದ್ದಾರೆ. ನನ್ನ ಆರೋಗ್ಯ ಹಾಳಾದಗ ನನ್ನ ಸಮಾಜದವರು ಯಾರು ಬಂದಿಲ್ಲ. ಇದೀಗ ಆಸ್ತಿ ಸಂಬಂಧ ನನ್ನ ಅಪಹರಣ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಇನ್ನು ತನ್ನ ಸ್ವಂತ ತಾಯಿ ನೋಡಿಕೊಂಡಂತೆ ಕರೆವ್ವಾಳನ್ನ ನೋಡಿಕೊಳ್ಳುತ್ತಿದ್ದೇನೆ. ಅವಳಿಗೆ ಚಿಕ್ಕದಾದ ಮನೆ ಕಟ್ಟಿಸಿ ಅದರಲ್ಲಿ ಇರುವಂತೆ ನೋಡಿಕೊಂಡಿದ್ದೇನೆ. ಕರೆವ್ವಾಳಿಗೆ ಹುಷಾರಿರಲಿಲ್ಲ ಹೆತ್ತತಾಯಿ ನೋಡಿಕೊಂಡ ರೀತಿ ಆರೈಕೆ ಮಾಡುತ್ತೇನೆ. ಕರೆವ್ವಾ ನನ್ನ ಹೆಸರಿಗೆ 1 ಎಕರೆ 20 ಗುಂಟೆ ಆಸ್ತಿ ಬರೆದಿದ್ದಾರೆ. ಕರೆವ್ವಾ ಸಾವನ್ನಪ್ಪಿದರೆ ಅವಳ ಅಂತ್ಯಕ್ರಿಯೆಯನ್ನ ಸಹ ಅವರ ಧರ್ಮದಂತೆ ಮಾಡಲು ನಿಶ್ಚಯಿಸಿದ್ದೇನೆ. ಆದರೆ ಅವಳು ನನ್ನ ಜೊತೆ ಇರುವುದು ಅವರ ಸಮಾಜದವರಿಗೆ ಇಷ್ಟವಿಲ್ಲ ಎನ್ನುತ್ತಾರೆ ಖಾಜಾ ಮೋಹಿದ್ದಿನ್.
ಹೀಗಾಗಿ ನನ್ನ ಮೇಲೆ ಇಲ್ಲದ ಕೇಸ್ ದಾಖಲು ಮಾಡಿದ್ದಾರೆ. ಅಲ್ಲದೇ ಜಾತಿನಿಂದನೆ ಕೇಸ್ ಹಾಕಲು ಸಹ ಮುಂದಾಗುತ್ತಿದ್ದಾರೆ. ಇವರ ಕಾಟದಿಂದ ನನಗೆ ಮತ್ತು ಕರೆವ್ವಾಳಿಗೆ ಸ್ವತಂತ್ರ ಬೇಕಾಗಿದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ನಮಗೆ ನೆಮ್ಮದಿ ಜೀವನ ನಡೆಸಲು ಅವಕಾಶ ಒದಗಿಸಬೇಕು ಎಂದು ಖಾಜಾ ಮೋಹಿದ್ದಿನ್ ಮೊರೆ ಇಡುತ್ತಿದ್ದಾರೆ.
ಇದನ್ನೂ ಓದಿ : ಆಸ್ತಿಗಾಗಿ ವೃದ್ಧೆಯ ಹಿಡಿದು ಎಳೆದಾಡಿದ್ರು! ಹಾವೇರಿಯಲ್ಲಿ ಅಮಾನವೀಯ ಘಟನೆ: ವಿಡಿಯೋ