ಹಾವೇರಿ: ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟ ದರ್ಶನ್ ಪ್ರಕರಣದಲ್ಲಿ ಎಸ್ಟಿ ಪಂಗಡ ದುರುಪಯೋಗ ಕುರಿತಂತೆ ಯಾರೂ ದೂರು ಸಲ್ಲಿಸಿಲ್ಲ ಎಂದು ಎಸ್ಸಿ ಎಸ್ಟಿ ಆಯೋಗದ ಅಧ್ಯಕ್ಷ ನೆಹರು ಓಲೇಕಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಘಟನೆ ಕುರಿತು ಯಾವ ಸಂಘಟನೆಗಳೂ ದೂರು ಸಲ್ಲಿಸಿಲ್ಲ. ದೂರು ನೀಡಿದ ನಂತರ ಅದನ್ನ ಖಚಿತಪಡಿಸಿಕೊಂಡು ಮಾಹಿತಿ ನೀಡುವುದಾಗಿ ನೆಹರು ಓಲೇಕಾರ್ ತಿಳಿಸಿದರು.
ರಾಜ್ಯದಲ್ಲಿ ಕೆಲ ನಾಯಕರು ಸಿಎಂ ಬದಲಾವಣೆ ಕುರಿತಂತೆ ಮಾತನಾಡುತ್ತಾರೆ. ಆದರೆ ಇದನ್ನು ಹೈಕಮಾಂಡ್ ಮಾಡುತ್ತದೆಯೇ ಹೊರತು ಸ್ಥಳೀಯ ನಾಯಕರಲ್ಲ. ಈ ಕುರಿತಂತೆ ಹೇಳಿಕೆ ನೀಡುವುದೇ ಈಗ ಕೆಲವರಿಗೆ ರೂಢಿಯಾಗಿದೆ. ಇದನ್ನು ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ, ಈ ವಿಷಯ ಅಪ್ರಸ್ತುತ ಎಂದರು.
ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ
ನಮ್ಮ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಎಲ್ಲ ಬಿಜೆಪಿ ನಾಯಕರು ಬದ್ದರಾಗಿರಲೇಬೇಕಾಗುತ್ತದೆ. ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಹೋಗಿಬಂದಿದ್ದಾರೆ. ಅವರಿಗೆ ಈ ಕುರಿತಂತೆ ಯಾವುದೇ ಮುನ್ಸೂಚನೆ ಕೊಟ್ಟಿಲ್ಲ. ಮುಂದಿನ ಎರಡು ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಹೇಳಿದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ
ಸಚಿವ ಸಂಪುಟ ವಿಸ್ತರಣೆಯಾಗಬೇಕಿದೆ. ಹಿರಿಯ ಮುಖಂಡರನ್ನ ಬಿಟ್ಟು ಬೇರೆಯವರಿಗೆ ಅವಕಾಶ ಕಲ್ಪಿಸಬೇಕು. ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ. ಮೂರು ಬಾರಿ ಶಾಸಕನಾಗಿ, ಮೂರು ಎಸ್ಸಿ ಎಸ್ಟಿ ಆಯೋಗದ ಅಧ್ಯಕ್ಷನಾಗಿ ಕೆಲಸ ಮಾಡಿದ ಅನುಭವವಿದೆ. ಈಗಾಗಿ ತಮಗೆ ಸಚಿವ ಸ್ಥಾನ ನೀಡಿದರೇ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ನೆಹರು ಓಲೇಕಾರ್ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ಇದೇ 27 ರಂದು ರಾಜೀನಾಮೆ ನೀಡಲಿದ್ದಾರೆ ಎಂಬ ವಿಷಯದ ಬಗ್ಗೆ ಮಾಹಿತಿ ಇಲ್ಲ. ಅಂದು ಶಾಸಕಾಂಗ ಸಭೆ ಔತಣಕೂಟಕ್ಕೆ ಆಹ್ವಾನ ಬಂದಿಲ್ಲ, ಕರೆ ಬಂದರೆ ಹೋಗುವುದಾಗಿ ತಿಳಿಸಿದರು.