ಹಾವೇರಿ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಸ ವಿಲೇವಾರಿಗೆ ಬಳಸುವ ಸ್ವಚ್ಛ ವಾಹಿನಿ ವಾಹನ ಚಾಲನೆಗೆ ಜಿಲ್ಲೆಯಲ್ಲಿ ಆಯ್ದ 32 ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಹಾವೇರಿ ಜಿಲ್ಲಾ ಪಂಚಾಯತ್ ವಿನೂತನ ಕ್ರಮ ಕೈಗೊಂಡಿದೆ.
109 ಟಿಪ್ಪರ್ ವಾಹನ ಹಸ್ತಾಂತರ:
ಸ್ವಚ್ಛ ಭಾರತ ಮಿಷನ್’ ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ ಅನುಷ್ಠಾನಕ್ಕೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಹಿಳಾ ಒಕ್ಕೂಟಗಳ ಗುಂಪಿನ ಸದಸ್ಯರಿಗೆ ತರಬೇತಿ ನೀಡಲಾಗುತ್ತಿದೆ. ಈಗಾಗಲೇ 32 ಸದಸ್ಯರ ಈ ತಂಡ ತರಬೇತಿ ಪೂರ್ಣಗೊಳಿಸಿದ್ದು, ಇದೀಗ ಗ್ರಾಮಗಳಲ್ಲಿ ಕಸ ವಿಲೇವಾರಿ ನಡೆಸಲಿದೆ. ಸರ್ಕಾರ ಈಗಾಗಲೇ ಜಿಲ್ಲೆಗೆ 5 ಕೋಟಿ ರೂ. ವೆಚ್ಚದಲ್ಲಿ 109 ಟಿಪ್ಪರ್ ವಾಹನ ಹಸ್ತಾಂತರ ಮಾಡಿದ್ದು, ಈ ಯೋಜನೆ ಯಶಸ್ವಿಯಾದರೆ ಜಿಲ್ಲೆಯ 170 ಗ್ರಾಮ ಪಂಚಾಯತ್‌ಗಳಿಗೆ ಯೋಜನೆ ವಿಸ್ತರಿಸುವ ಚಿಂತನೆಯನ್ನು ಜಿಲ್ಲಾ ಪಂಚಾಯತ್ ನಡೆಸಿದೆ.
ನುರಿತ ಚಾಲಕರಿಂದ ತರಬೇತಿ:
ಹಾವೇರಿ ಸಮೀಪದ ದೇವಗಿರಿಯಲ್ಲಿರುವ ರೂಡ್ ಸೆಟ್ ಸಂಸ್ಥೆ ಮಹಿಳೆಯರಿಗೆ ವಾಹನ ತರಬೇತಿ ನೀಡಿದೆ. ಬೆಂಗಳೂರಿನಿಂದ ನುರಿತ ಚಾಲಕರನ್ನ ಕರೆಯಿಸಿ ವಾಹನ ಚಾಲನಾ ತರಬೇತಿ ನೀಡಲಾಗಿದೆ. ಇದೇ ಪ್ರಥಮ ಬಾರಿಗೆ ತಿಂಗಳುಗಳ ಕಾಲ ಮಹಿಳೆಯರಿಗೆ ತರಬೇತಿ ನೀಡಿರುವುದು ಸಂತಸ ತಂದಿದೆ ಎಂದು ರೂಡ್ ಸೆಟ್ ನಿರ್ದೇಶಕ ಶಾಜಿತ್ .ಎಸ್ ತಿಳಿಸಿದ್ದಾರೆ.
ಅಧಿಕಾರಿಗಳ ಸೂಚನೆಯಂತೆ ಕಾರ್ಯನಿರ್ವಹಣೆ:
ಈ ರೀತಿ ತರಬೇತಿ ಸಿಕ್ಕಿರುವುದು ತಮಗೆ ಹೆಮ್ಮೆ ಎನಿಸುತ್ತದೆ. ನಮ್ಮೂರಿನ ಗ್ರಾಮ ಪಂಚಾಯಿತಿಗಳು ನಮ್ಮನ್ನ ಆಯ್ಕೆ ಮಾಡಿ ಕಳುಹಿಸಿವೆ. ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಸೂಚನೆಯಂತೆ ಕಾರ್ಯನಿರ್ವಹಿಸುವ ಇಂಗಿತವನ್ನು ಮಹಿಳಾ ಚಾಲಕಿಯರು ವ್ಯಕ್ತಪಡಿಸಿದ್ದಾರೆ.
ತರಬೇತಿ ಪಡೆದ ಮಹಿಳೆಯರ ವಿದ್ಯಾರ್ಹತೆ:
ಇನ್ನು ವಾಹನ ಚಾಲನಾ ತರಬೇತಿ ಪಡೆದ 32 ಮಹಿಳೆಯರಲ್ಲಿ ಓರ್ವ ಮಹಿಳೆ ಡಬಲ್ ಗ್ರಾಜ್ಯುಯೇಟ್ ಆಗಿದ್ದಾರೆ. ಮೂವರು ಮಹಿಳೆಯರು ಪದವೀಧರರಾಗಿದ್ದಾರೆ. 6 ಮಹಿಳೆಯರು ದ್ವಿತೀಯ ಪಿಯುಸಿ ಪಾಸಾಗಿದ್ದಾರೆ. ಉಳಿದಂತೆ 19 ಮಹಿಳೆಯರು 8 ರಿಂದ 10ನೇ ತರಗತಿ ಉತ್ತೀರ್ಣರಾಗಿದ್ದಾರೆ. ಮೂರು ಜನ ಮಾತ್ರ 7ನೇ ತರಗತಿ ವ್ಯಾಸಂಗ ಮಾಡಿದ್ದಾರೆ.