ಹಾವೇರಿ: ಬಿಜೆಪಿ ಟಿಕೆಟ್ ವಂಚಿತ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಅವರ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಶುಕ್ರವಾರ ಸೇರ್ಪಡೆಯಾಗಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಆರ್ ಶಂಕರ್ ಅವರು ಭಾರತೀಯ ಜನತಾ ಪಕ್ಷಕ್ಕೆ ಬಿಜೆಪಿ ಪಕ್ಷಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆಗೆ ಮುಂದಾಗಿದ್ದರು. ಅಲ್ಲದೆ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯ ಪ್ರಯತ್ನ ಕೂಡ ಮಾಡಿದ್ದರು. ಇವ್ಯಾವುದು ಫಲಪ್ರದವಾಗದ ಶುಕ್ರವಾರದಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಆರ್ ಶಂಕರ್ ಸೇರ್ಪಡೆಯಾಗಿದ್ದಾರೆ.
ಪಕ್ಷೇತರರಾಗಿ ಸ್ಪರ್ಧೆ ಮಾಡಲು ಚಿಹ್ನೆಗಳು ಸಮಸ್ಯೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಆರ್ ಶಂಕರ್ ಇದೀಗ ಗಡಿಯಾರ ಚಿಹ್ನೆ ಇರುವ ಎನ್‌ಸಿಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಿಂದ ರಾಣೆಬೆನ್ನೂರಿಗೆ ಆಗಮಿಸಿದ ಅವರಿಗೆ ತಮ್ಮ ಬೆಂಬಲಿಗರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಚಿಹ್ನೆ ಇರುವ ಶಾಲು ಹೊದಿಸಿ ಬರಮಾಡಿಕೊಂಡರು.
ಇದನ್ನೂ ಓದಿ: ಸಿಂಧನೂರು, ಮಾನ್ವಿಯಲ್ಲಿ ಮಾಜಿ ಶಾಸಕರಿಗೆ ಮಣೆ.. ದೇವದುರ್ಗದಲ್ಲಿ ಶ್ರೀದೇವಿಗೆ ಒಲಿದ ಟಿಕೆಟ್
ಕನಿಷ್ಠ 40 ಕ್ಷೇತ್ರಗಳಿಂದ ಎನ್‌ಸಿಪಿ ಸ್ಪರ್ಧೆ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಕನಿಷ್ಠ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಹರಿ.ಆರ್ ಶನಿವಾರ ತಿಳಿಸಿದ್ದಾರೆ. ಇದೇ ವೇಳೆ ನಾಲ್ಕೈದು ಜನ ಬಿಜೆಪಿ ಶಾಸಕರು ಪಕ್ಷದ ಸಂಪರ್ಕದಲ್ಲಿದ್ದಾರೆ. ಚುನಾವಣೆಗೆ ಮುನ್ನವೇ ಪಕ್ಷಕ್ಕೆ ಸೇರುವ ನಿರೀಕ್ಷೆಯಿದೆ ಎಂದು ತಿಳಸಿದರು.
ಕರ್ನಾಟಕ ಚುನಾವಣೆ ಸಂಬಂಧ ಇಂದು ಮುಂಜಾನೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂಬೈನಲ್ಲಿರುವ ಪಕ್ಷದ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆ ನಡೆಸಿದರು. ಇದರ ಬೆನ್ನಲ್ಲೇ ಮಾತನಾಡಿರುವ ಕರ್ನಾಟಕ ಘಟಕದ ಅಧ್ಯಕ್ಷ ಹರಿ, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯ ನಾಲ್ಕೈದು ಹಾಲಿ ಶಾಸಕರೊಂದಿಗೆ ಬೆಂಗಳೂರಿನ ಮಾಜಿ ಮೇಯರ್ ಕೂಡ ಶೀಘ್ರದಲ್ಲೇ ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇನ್ನೂ ಸಮಯ ಇದೆ, ಕಾದು ನೋಡೋಣ.. ಟಿಕೆಟ್ ನೀಡಿಯೇ ನೀಡುತ್ತಾರೆ: ಶೆಟ್ಟರ್ ವಿಶ್ವಾಸ
ಇತ್ತೀಚೆಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಎನ್‌ಸಿಪಿ ಕಳೆದುಕೊಂಡಿದೆ. ಇದನ್ನು ಮರಳಿ ಪಡೆಯುವ ಯತ್ನದ ಭಾಗವಾಗಿ ಕರ್ನಾಟಕ ಚುನಾವಣೆಯತ್ತ ಪಕ್ಷ ಚಿತ್ತ ನೆಟ್ಟಿದ್ದು, ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಲು ಮುಂದಾಗಿದೆ. 2018ರ ಚುನಾವಣೆಯಲ್ಲಿ ಎನ್‌ಸಿಪಿ ಕರ್ನಾಟಕದಲ್ಲಿ 14 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಸದ್ಯ 224 ಸದಸ್ಯರ ಬಲದ ಕರ್ನಾಟಕ ವಿಧಾನಸಭೆಗೆ ಮೇ 10ರಂದು ಮತದಾನ ಮತ್ತು ಮೇ 13ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಕಾಂಗ್ರೆಸ್ ಮೂರನೇ ಪಟ್ಟಿ ರಿಲೀಸ್: ಲಕ್ಷ್ಮಣ್ ಸವದಿಗೆ ಟಿಕೆಟ್.. ಸಿದ್ದರಾಮಯ್ಯಗೆ ಕೋಲಾರ ಮಿಸ್