ಹಾವೇರಿ : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನಮ್ಮೆಲ್ಲರ ಸರ್ವೋನ್ನತ ನಾಯಕರು. ಅವರು ಅಧಿಕಾರದಲ್ಲಿರಲಿ, ಇಲ್ಲದಿರಲಿ ಅವರ ಸಲಹೆ ಮಾರ್ಗದರ್ಶನ ಪಡೆಯುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಐಟಿ ದಾಳಿಗೂ ಮತ್ತು ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದರು. ಎಲ್ಲ ಪಕ್ಷಗಳ ನಾಯಕರ ಮೇಲೂ ಐಟಿ ದಾಳಿ ಮಾಡುತ್ತೆ. ಅದು ಆದಾಯಕ್ಕಿಂತ ಅಧಿಕ ಸಂಪನ್ಮೂಲ ಹೊಂದಿದವರ ಬಗ್ಗೆ ಗಮನ ಹರಿಸುವ ಸಂಸ್ಥೆ.
ಯಾವುದೇ ಪಕ್ಷದ ಮುಖಂಡರು, ವಿರೋಧಿಗಳು ಅಂತಾ ಬೇಧವಿಲ್ಲದೇ ಎಲ್ಲರ ಮೇಲೂ ದಾಳಿ ಮಾಡಿ ದಾಖಲೆಗಳನ್ನ ಪರಿಶೀಲನೆ ಮಾಡುತ್ತದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅವರಿಂದ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಪೂಜಾರಿ ಸ್ಪಷ್ಟಪಡಿಸಿದರು. ನಮಗೆ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬಸವರಾಜ್ ಬೊಮ್ಮಾಯಿ ಮುಖಂಡತ್ವದಲ್ಲಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಘಟನೆಯಲ್ಲಿ ನಾವು ಒಂದಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ. ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಪೂಜಾರಿ ತಿಳಿಸಿದರು.
ಮಾಜಿ ಸಚಿವ ರಮೇಶ ಕುಮಾರ್ ಶುಕ್ರವಾರ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿದ್ದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಅವರು ಆಡಳಿತಾತ್ಮಕ ವಿಚಾರವಾಗಿ ಸಿಎಂ ಭೇಟಿಯಾಗಿದ್ದಾರೆ ಎಂದರು.
ಹಾನಗಲ್ ಮತ್ತು ಸಿಂದಗಿ ವಿಧಾನಸಭೆಗಳ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ತಿಳಿಸಿದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಆಯ್ಕೆ ಬಗ್ಗೆ ಗೊಂದಲ, ಕೆಲ ಬೇಡಿಕೆಗಳು ವ್ಯಕ್ತವಾಗಿರಬಹುದು.
ಆದರೆ, ಇಲ್ಲಿಯ ಮುಖಂಡರೆಲ್ಲ ಒಂದಾಗಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನ ಜನರಿಗೆ ತಲುಪಿಸುತ್ತೇವೆ. ಶಿವರಾಜ್ ಸಜ್ಜನರ್ ಶಾಸಕರನ್ನಾಗಿ ಆಯ್ಕೆ ಮಾಡಿ ಕಳಿಸುತ್ತೇವೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.