ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರ ಮೂಕಪ್ಪಶ್ರೀಗಳಮಠಕ್ಕೆ ಇದೇ 24ರ ಅಮವಾಸ್ಯೆಯಂದು ಶ್ರೀಗಳ ದರ್ಶನ ಇರುವುದಿಲ್ಲ ಎಂದು ಧರ್ಮಾಧಿಕಾರಿ ಮೃತ್ತುಂಜಯಸ್ವಾಮೀಜಿ ತಿಳಿಸಿದ್ದಾರೆ.
ಈ ಮಠಕ್ಕೆ 11 ಅಮವಾಸ್ಯೆಗಳು ನಡೆದುಕೊಂಡರೆ ಸಾಕು ಇಷ್ಟಾರ್ಥ ಸಿದ್ಧಿಸುತ್ತವೆ ಎಂಬ ನಂಬಿಕೆ ಇಲ್ಲಿ ಮನೆಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಅಮವಾಸ್ಯೆಗೆ ಶ್ರೀಕ್ಷೇತ್ರಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಇಲ್ಲಿಯ ವೃಷಭರೂಪಿ ಸ್ವಾಮೀಜಿಗಳ ದರ್ಶನ ಪಡೆದು ಪುನೀತರಾಗುತ್ತಾರೆ. ರಾಜ್ಯದಲ್ಲಿಯೇ ಕೊರೊನಾ ಭೀತಿ ಎದುರಾಗಿದ್ದು, ಸರ್ಕಾರ ಹೆಚ್ಚು ಜನ ಸೇರುವುದು ಬೇಡ ಎಂದು ಸೂಚಿಸಿದ ಬೆನ್ನಲ್ಲೆ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ದರ್ಶನ ಬಂದ್ ಮಾಡಿರುವುದಾಗಿ ಧರ್ಮದರ್ಶಿ ತಿಳಿಸಿದ್ದಾರೆ.
ಇದೇ ವೇಳೆ ಶ್ರೀಗಳು ಕೊರೊನಾ ಸೋಂಕಿತರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ ಇಲಾಖೆಗೆ ದೇವರ ಒಳ್ಳೆಯದನ್ನು ಮಾಡಲಿ. ವಿಶ್ವದಿಂದ ಆದಷ್ಟು ಬೇಗ ವೈರಸ್ ತೊಲಗಲಿ ಎಂದು ಬೇಡಿಕೊಂಡಿರುವುದಾಗಿ ತಿಳಿಸಿದರು.