ಹಾವೇರಿ: ಉತ್ತರಕ ರ್ನಾಟಕದ ರೈತರ ಗ್ರಾಮೀಣ ಸೊಗಡಿನ ಹಬ್ಬಗಳಲ್ಲಿ ಒಂದಾಗಿರುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತದೆ. ರೈತನ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತುಗಳನ್ನು ಮಣ್ಣಿನ ರೂಪದಲ್ಲಿ ಪೂಜಿಸುವ ಹಬ್ಬವೇ ಈ ಮಣ್ಣೆತ್ತಿನ ಅಮಾವಾಸ್ಯೆ. ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ ರೈತನ ಬೆನ್ನೆಲುಬು ಆಗಿ ಜಮೀನು ಹದಗೊಳಿಸುವಲ್ಲಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬ ಸಹ ಇದಾಗಿದೆ.
ಈ ದಿನ ರೈತರು ತಮ್ಮ ಜಮೀನುಗಳಿಗೆ ಹೋಗಿ ಅಥವಾ ಕೆರೆ ಕಟ್ಟಿಗೆ ಹೋಗಿ ಅಲ್ಲಿಂದ ತಂದ ಮಣ್ಣಿನಿಂದ ಜೋಡಿ ಎತ್ತುಗಳನ್ನು ಮಣ್ಣಿನಲ್ಲಿ ತಯಾರಿಸುತ್ತಾರೆ. ಮಣ್ಣೆತ್ತಿನ ಜೋಡಿಗೆ ಗ್ವಾಂದಲಿಗಳನ್ನು (ಎತ್ತುಗಳು ಮೇವು ತಿನ್ನುವ ಸ್ಥಳ) ಸಹ ನಿರ್ಮಿಸಲಾಗುತ್ತದೆ. ಮಣ್ಣಿನ ಬಸವಣ್ಣಗಳನ್ನು ದೇವರ ಜಗಲಿ ಮೇಲೆ ಇಟ್ಟು ಪೂಜೆ ಸಲ್ಲಿಸುವ ಮೂಲಕ ರೈತ ಕುಟುಂಬಗಳು ಎತ್ತುಗಳಿಗೆ ದೈವಿ ಸ್ವರೂಪ ನೀಡುವುದು ಸಂಪ್ರದಾಯ.
ಅಮಾವಾಸ್ಯೆಯಂದು ಬಸವಣ್ಣನಿಗೆ ತಯಾರಿಸಿದ ಕಡುಬು, ಅಕ್ಕಿಪಾಯಸ ಸೇರಿದಂತೆ ವಿವಿಧ ಆಹಾರ ಸೇರಿ ನೈವೇದ್ಯ ಹಿಡಿಯಲಾಗುತ್ತದೆ. ಈ ಸಂದರ್ಭದಲ್ಲಿ ರೈತಾಪಿ ಕುಟುಂಬಗಳು ತಮ್ಮ ಎತ್ತುಗಳಿಗೆ ಯಾವುದೇ ರೋಗ ರುಜಿನಗಳು ಬಾರದಂತೆ ದೇವರಲ್ಲಿ ಬೇಡಿಕೊಳ್ಳುವರು. ಕೆಲ ರೈತರು ಒಂದು ದಿನ, ಅಥವಾ ಕೆಲ ರೈತರು ಐದು ದಿನಗಳ ಕಾಲ ಬಸವಣ್ಣನ ಮೂರ್ತಿಗಳನ್ನು ಪೂಜಿಸಿದ ನಂತರ ನದಿ ಮೂಲಗಳಿಗೆ ತೆರಳಿ ನಿಮಜ್ಜನ ಮಾಡಲಾಗುತ್ತದೆ.
ಕೆಲ ರೈತರು ತಮ್ಮ ಜಮೀನಿನ ಬನ್ನಿಗಿಡದ ಕೆಳಗೆ ಮಣ್ಣಿನ ಬಸವಣ್ಣಗಳನ್ನು ಇಟ್ಟು ಪೂಜಿಸುತ್ತಾರೆ. ಪ್ರತಿ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಮೊಳೆಕೆಯೊಡೆದು ಚಿಗುರುತ್ತಿರುವ ದಿನಗಳಲ್ಲಿ ರೈತನಿಗೆ ಈ ಹಬ್ಬ ಹರ್ಷ ತರುತ್ತದೆ. ಆದರೆ ಪ್ರಸ್ತುತ ವರ್ಷ ಮಾತ್ರ ರಾಜ್ಯಕ್ಕೆ ಮುಂಗಾರು ಮಳೆಯ ಆಗಮನ ಆಗಿಲ್ಲಾ. ಇತ್ತ ಪೂರ್ವ ಮುಂಗಾರು ಸಹ ಸರಿಯಾಗಿ ಆಗದಿರುವ ಹಿನ್ನೆಲೆಯಲ್ಲಿ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಮಣ್ಣಿ ಮೂರ್ತಿ ಮಾರಾಟ ನೀರಸ: ಮಣ್ಣೆತ್ತಿನ ಅಮಾವಾಸ್ಯೆ ಮುನ್ನಾ ದಿನ ಶನಿವಾರ ಹಾವೇರಿಯಲ್ಲಿ ಮಣ್ಣಿನ ಎತ್ತುಗಳ ಮೂರ್ತಿ ಮಾರಾಟ ನೀರಸವಾಗಿತ್ತು. ಬೆರಳೆಣಿಕೆಯಷ್ಟು ರೈತರು ಎತ್ತುಗಳ ಮಣ್ಣಿನ ಮೂರ್ತಿಗಳನ್ನ ಖರೀದಿಸಿದರು. ಇನ್ನು ಬಾರದ ಮಳೆಯಿಂದ ಕಂಗೆಟ್ಟಿರುವ ರೈತ ಸಮುದಾಯದಲ್ಲಿ ಉತ್ತೇಜನದ ಕೊರತೆ ಎದ್ದು ಕಾಣುತ್ತಿದೆ.
ಜಮೀನಿಗೆ ಬಿತ್ತನೆ ಮಾಡಲು ತಂದ ಬಿತ್ತನೆ ಬೀಜ ಗೊಬ್ಬರಗಳು ಮನೆಯಲ್ಲಿವೆ. ಈ ನಡುವೆ ಮಣ್ಣೆತ್ತಿನ ಅಮಾವಾಸ್ಯೆ ಬಂದಿದೆ. ಪ್ರತಿವರ್ಷದಂತೆ ಈ ವರ್ಷ ಸಹ ಮಣ್ಣೆತ್ತಿನ ಅಮಾವಾಸ್ಯೆ ಆಚರಿಸುತ್ತಿದ್ದೇವೆ. ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಮಳೆಯಾದರೂ ನಮ್ಮ ಕೈಹಿಡಿಯಲಿ ಎಂದು ರೈತರು ಮಳೆರಾಯನಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬರುವ ರೈತರ ಪ್ರಥಮ ಹಬ್ಬ ಇದಾಗಿದೆ. ವರ್ಷದ ಮೂರು ಮಾಸಗಳಲ್ಲಿ ಆಷಾಢ, ಶ್ರಾವಣ ಮತ್ತು ಭಾದ್ರಪದದಲ್ಲಿ ಮಣ್ಣಿನ ಪ್ರತಿಮೆಗಳನ್ನು ಪೂಜಿಸುವ ಸಂಪ್ರದಾಯ ಮನೆಮಾಡಿದೆ. ಮಣ್ಣೆತ್ತಿನ ಅಮಾವಾಸ್ಯೆಯಿಂದ ಆರಂಭವಾಗುವ ಈ ಸಂಪ್ರದಾಯಗಳು ನಾಗರ ಪಂಚಮಿಯಲ್ಲಿ ನಾಗಪ್ಪ, ಗಣೇಶ ಚತುರ್ಥಿಯಂದು ಗಣಪತಿ, ಜೋಕುಮಾರ, ಮತ್ತು ದೀಪಾವಳಿ ವೇಳೆಗೆ ಗುಳ್ಳವ್ವ ಪೂಜೆ ಮಾಡುವವರೆಗೆ ಮುಂದುವರೆಯುತ್ತವೆ.
ಈ ಮಣ್ಣಿನ ಬಸವಣ್ಣಗಳನ್ನು ಕುಂಬಾರರು, ಬಡಿಗೇರ ಮನೆತನದವರು ಮಾಡುವ ಸಂಪ್ರದಾಯವಿದೆ. ಮೊದ ಮೊದಲು ಮಣ್ಣಿನಿಂದ ತಯಾರಿಸಿದ ಬಸವಣ್ಣ ಮತ್ತು ಗ್ವಾಂದಲಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಇತ್ತೀಚೆಗೆ ಮಣ್ಣಿನಮೂರ್ತಿಗಳಿಗೆ ಬಣ್ಣಗಳ ಆಲಂಕಾರ ಮಾಡಲಾಗುತ್ತದೆ. ಈ ದಿನ ರೈತರು ತಮ್ಮ ಎತ್ತುಗಳನ್ನು ಯಾವುದೇ ಕೃಷಿ ಚಟುವಟಿಕೆಗೆ ಬಳಸುವುದಿಲ್ಲ.
ಮನೆಯಲ್ಲಿನ ಎಲ್ಲ ದನ ಕರುಗಳ ಮೈ ತೊಳೆದು, ಹೂಗಳಿಂದ ಸಿಂಗರಿಸಿ, ಪೂಜೆ ಮಾಡಲಾಗುತ್ತದೆ. ಕೃಷಿಯಲ್ಲಿ ಎತ್ತುಗಳ ಮಹತ್ವ ಮತ್ತು ಅವುಗಳ ಪಾತ್ರ ಸಾರುವ ಮಣ್ಣಿತ್ತಿನ ಅಮಾವಾಸ್ಯೆ ಆಚರಣೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ.