ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಮದಗಮಾಸೂರು ಕೆರೆ ಏಷ್ಯಾ ಖಂಡದಲ್ಲಿಯೇ ಎರಡನೇ ಆಳದ ಕೆರೆ. ಈ ಕೆರೆ ಹಾವೇರಿ ಜಿಲ್ಲೆ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕುಗಳು ನೂರಾರು ಗ್ರಾಮಗಳ ಜೀವನಾಡಿಯಾಗಿದೆ. ಮಳೆಗಾಲದಲ್ಲಿ ಭರಪೂರ ತುಂಬುವ ಈ ಕೆರೆಯಿಂದ ಚಿಕ್ಕದಾದ ಜಲಪಾತ ಸಹ ಸೃಷ್ಠಿಯಾಗುತ್ತೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಮತ್ತು ಮಲೆನಾಡಿನಲ್ಲಿ ಸುರಿದ ಮಳೆಯ ನೀರು ಕುಮದ್ವತಿ ನದಿಯಾಗಿ ಈ ಕೆರೆಯಲ್ಲಿ ಸೇರ್ಪಡೆಯಾಗುತ್ತೆ. ನಂತರ ಕೆರೆ ತುಂಬಿದ ಮೇಲೆ ಅಲ್ಲಿಂದ ಜಲಪಾತವಾಗಿ ಮತ್ತೆ ಕುಮದ್ವತಿ ನದಿಯಾಗಿ ಹರಿಯುತ್ತದೆ. ಆದರೆ ಕಳೆದ ಕೆಲ ವರ್ಷಗಳಿಂದ ಈ ಕೆರೆ ಒತ್ತುವರಿಗೆ ತುತ್ತಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಕೆರೆಯ ವಿಸ್ತೀರ್ಣ ಕಡಿಮೆಯಾಗುತ್ತಿದೆ. 950 ಹೆಕ್ಟೇರ್ ವಿಸ್ತೀರ್ಣದ ಕೆರೆ ಇದೀಗ 450 ಹೆಕ್ಟೇರ್ ವಿಸ್ತೀರ್ಣಕ್ಕೆ ಕುಗ್ಗಿದೆ. ಕೆರೆಯ ದಂಡೆ ಸೇರಿದಂತೆ ಅಂಚಿನ ಭಾಗದಲ್ಲಿ ಕೆಲವರು ಸಾಗುವಳಿ ಮಾಡಿಕೊಂಡಿದ್ದಾರೆ. ಒತ್ತುವರಿಯಾದ ಜಮೀನಿನಲ್ಲಿ ಗೋವಿನಜೋಳ, ಬಾಳೆಗಿಡ, ಚೆಂಡು ಹೂ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆದಿದ್ದಾರೆ. ಅಲ್ಲದೆ ಕೆರೆಯಲ್ಲಿ ಸುಮಾರು 70 ಅಡಿ ಆಳದವರೆಗೆ ಹೂಳು ತುಂಬಿದೆ ಎಂದು ವೈಜ್ಞಾನಿಕ ಅಧ್ಯಯನ ಸ್ಪಷ್ಟಪಡಿಸಿದೆ. ವರ್ಷದಿಂದ ವರ್ಷಕ್ಕೆ ಹೂಳು ತುಂಬುತ್ತಿದ್ದು ಕೆರೆಯಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಸಹ ಕಡಿಮೆಯಾಗುತ್ತಿದೆ. ಕೆರೆಯ ಹೂಳು ತೆಗೆದು ಒತ್ತುವರಿ ತೆರವು ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕೆರೆ ಒತ್ತುವರಿ ತಡೆಯಲು ಅದರ ಸುತ್ತಲು ತಡೆಗೋಡೆ ನಿರ್ಮಿಸಬೇಕು. ಕೆರೆಯಲ್ಲಿ ತುಂಬಿರುವ ಹೂಳು ತೆಗೆದು ಕೆರೆಯಲ್ಲಿ ಹೆಚ್ಚು ನೀರು ನಿಲ್ಲುವಂತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕೆರೆ ತುಂಬಿದರೆ ಅಂತರ್ಜಲ ಭರಪೂರವಾಗಿ ರೈತರಿಗೆ ಸಿಗುತ್ತದೆ. ಆದರೆ ಕೆರೆಯಲ್ಲಿ ನೀರು ನಿಲ್ಲಲು ಅವಕಾಶ ಮಾಡಿಕೊಡದ ಕಾರಣ ನೀರು ಹರಿದು ಹೋಗಿ ಕೆರೆ ಖಾಲಿಯಾಗುತ್ತಿದೆ. ಕೆರೆಗೆ ಸರಿಯಾದ ಒಡ್ಡು ನಿರ್ಮಿಸಿದರೆ ಸಂಗ್ರಹವಾಗುವ ನೀರಿನಿಂದ ರಟ್ಟಿಹಳ್ಳಿ ಮತ್ತು ಹಿರೇಕೆರೂರಿನ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬಹುದಾಗಿದೆ. ಆದರೆ ನಮ್ಮ ಮನವಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಪಂದಿಸಿಲ್ಲಾ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ಹೂಳು ತೆಗೆಸುವ ಕಾರ್ಯಕ್ಕೆ ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಹಿರೇಕೆರೂರು ಶಾಸಕ ಯು.ಬಿ.ಬಣಕಾರ, ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ಹೂಳು ತುಂಬಿರುವ ಕಾರಣ ಅದನ್ನು ತೆಗೆಯಲು ಎಷ್ಟು ವೆಚ್ಚ ತಗುಲುತ್ತದೆ ಎಂಬುದರ ಬಗ್ಗೆ ಲೆಕ್ಕಚಾರ ಹಾಕಲಾಗುತ್ತಿದೆ. ಹೂಳೆತ್ತುವ ಬಗ್ಗೆ ಸರ್ಕಾರದ ಮುಂದೆ ಪ್ರಸ್ತಾವನೆ ಮಾಡಲಾಗುತ್ತದೆ. ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಗೊಂಡ ನಂತರ ಒತ್ತುವರಿ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಅರಣ್ಯಭೂಮಿ ಒತ್ತುವರಿ ತೆರವು ವೇಳೆ ಜೆಸಿಬಿಗಳ ಮೇಲೆ ಕಲ್ಲು ತೂರಾಟ