ದಾವಣಗೆರೆ: ಉತ್ತರ ಪ್ರದೇಶ ದೇಶಕ್ಕೆ ಅತೀ ಹೆಚ್ಚು ಯೋಧರನ್ನು ನೀಡಿದ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದೆ. ಇದರ ನಂತರದ ಸ್ಥಾನ ಪಂಜಾಬ್‌ಗಿದೆ. ಆದರೆ ಜಿಲ್ಲೆ ಹಾಗು ಗ್ರಾಮಗಳ ಲೆಕ್ಕದಲ್ಲಿ ದೇಶದ ಸೇವೆಗೆ ಹೆಚ್ಚು ಯೋಧರನ್ನು ನೀಡಿದ ತಾಲೂಕು ಮಡಿಕೇರಿಯಾದರೆ, ಗ್ರಾಮಗಳ ಪೈಕಿ ದಾವಣಗೆರೆಯ ತೋಳಹುಣಸೆ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ. ಈ ಪುಟ್ಟ ಗ್ರಾಮ ದೇಶ ಸೇವೆಗೆ ಹೆಚ್ಚು ಯೋಧರನ್ನು ನೀಡಿದ್ದು, 'ಯೋಧರ ತವರೂರು' ಎಂಬ ಹಿರಿಮೆ ಗಳಿಸಿದೆ.
ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮ ಇದೀಗ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಗ್ರಾಮದಲ್ಲಿ ಮನೆಗೆ ಇಬ್ಬರಂತೆ ಭಾರತೀಯ ಸೇನೆ ಸೇರಿ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಈ ಗ್ರಾಮದಲ್ಲಿ ಸುಮಾರು ಎರಡು ಸಾವಿರ ಜನರಿದ್ದು, ಅನೇಕರು ಬೇರೆ ಬೇರೆ ಊರುಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಮೊಟ್ಟಮೊದಲಿಗೆ 1994ರಲ್ಲಿ ಈ ಗ್ರಾಮದಿಂದ 4 ಮಂದಿ ಯುವಕರು ಉತ್ಸಾಹದಿಂದ ಸೇನೆ ಸೇರಿದ್ದರು. ಬಳಿಕ ಈ ಸಂಖ್ಯೆ ಹಂತಹಂತವಾಗಿ ಏರುತ್ತಾ ಇಲ್ಲಿಯತನಕ 300-400 ಮಂದಿ ದೇಶದ ವಿವಿಧ ಸ್ಥಳಗಳಲ್ಲಿ ದೇಶಸೇವೆ ಮಾಡಿದ್ದಾರೆ. 50ಕ್ಕೂ ಹೆಚ್ಚು ಜನ ನಿವೃತ್ತಿ ಪಡೆದು ಇದೇ ತೋಳಹುಣಸೆ ಗ್ರಾಮದ ಯುವಕರಿಗೆ ಸೇನೆ ಸೇರುವಂತೆ ಹುರಿದುಂಬಿಸುತ್ತಿದ್ದಾರೆ. ಯುವಕರು ಸೇನೆ ಸೇರಲು ಜಿಮ್ ಹಾಗು ಗರಡಿ ಮನೆಯಲ್ಲಿ ಕಸರತ್ತು ಮಾಡುತ್ತಾ ತಯಾರಿಯಲ್ಲಿದ್ದಾರೆ.
"ನಮ್ಮ ಚಿಕ್ಕಪ್ಪ ವೆಂಕಟೇಶ್ 21 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಜಮ್ಮು ಕಾಶ್ಮೀರ, ದೆಹಲಿ, ಹೈದರಾಬಾದ್, ಜಾರ್ಖಂಡ್ನಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರಂತೆ ನಾವೂ ಸೇನೆ ಸೇರಲು ತಯಾರಿ ನಡೆಸುತ್ತಿದ್ದೇವೆ" ಎಂದು ಯುವಕ ಕಿಶೋರ್ ಕುಮಾರ್ ಹೇಳಿದರು.
ಯುವಕರು ಸೇನೆ ಸೇರಲು ತಾಯಂದಿರೇ ಸ್ಫೂರ್ತಿ: ತೋಳಹುಣಸೆ ಗ್ರಾಮದ ಯುವಕರು ಬಿಎಸ್ಎಫ್, ಸಿಎಸ್ಎಫ್, ಸಿಆರ್ಪಿಎಫ್ಗಳಲ್ಲಿ ಸೇವೆ ಸಲ್ಲಿಸಲು ತಾಯಂದಿರ ಸ್ಪೂರ್ತಿಯೇ ಕಾರಣವಂತೆ. ಇಲ್ಲಿನ ತಾಯಂದಿರು ತಮ್ಮ ಮಕ್ಕಳಿಗೆ ಸೇನೆ ಸೇರುವುದಕ್ಕೆ ನಿರಾಕರಿಸುವುದಿಲ್ಲವಂತೆ. ಬದಲಾಗಿ ಸೇನೆ ಸೇರಿ ಒಳ್ಳೆಯ ಹೆಸರು ತರುವಂತೆ ಗಡಿಕಾಯಲು ಕಳುಹಿಸಿಕೊಡುವ ಪದ್ಧತಿ ಇಂದಿಗೂ ಇದೆ.
ನಿವೃತ್ತ ಯೋಧನ ತಾಯಿ ರೂಪಿಬಾಯಿ ಪ್ರತಿಕ್ರಿಯಿಸಿ, "ಮಗನನ್ನು ಸೇನೆಗೆ ಕಳಿಸಲು ಬಹಳ ಕಷ್ಟವಾಯಿತು. ಸಾಕಷ್ಟು ಅತ್ತು ಕಳಿಸಿದ್ದೇನೆ. 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮರಳಿದ್ದಾನೆ. ಸದ್ಯ ಬ್ಯಾಂಕ್ನಲ್ಲಿ ಕೆಲಸವಿದೆ. ಸೇನೆಯಲ್ಲಿದ್ದಾಗ ಮಗನ ನೆನಪು ಹೆಚ್ಚಾಗುತ್ತಿತ್ತು. ಹೆದರಿಕೆ, ಭಯವೂ ಇತ್ತು. ಆದರೆ ಈಗ ಮಗ ದೇಶ ಸೇವೆ ಮಾಡಿ ಬಂದಿದ್ದರಿಂದ ಹೆಮ್ಮೆ ಇದೆ" ಎಂದರು.
1994ರಿಂದ ಈ ಗ್ರಾಮದ ಯಾವೊಬ್ಬ ಯೋಧನೂ ಕೂಡ ಜೀವ ಕಳೆದುಕೊಳ್ಳದೆ ನಿಷ್ಠಾವಂತರಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು 300-400 ಜನ ಸೇವೆ ಸಲ್ಲಿಸಿದ್ದಾರೆ ಎಂದು ನಿವೃತ್ತ ಯೋಧ ಉಮೇಶ್ ನಾಯ್ಕ್ ತಿಳಿಸಿದ್ದಾರೆ.
ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅವರು, "2004ರಲ್ಲಿ ಸೇನೆ ಸೇರಿದೆ. ಜಮ್ಮು ಕಾಶ್ಮೀರ, ಗುಜರಾತ್, ಕೊಲ್ಕತ್ತಾ, ಪಂಜಾಬ್ ವಿವಿಧ ಭಾಗದಲ್ಲಿ ಕೆಲಸ ಮಾಡಿದ್ದೇನೆ. ತೋಳಹುಣಸೆ ಗ್ರಾಮದಲ್ಲಿ 300-400 ಜನ ಸೇನೆ ಸೇರಿದ್ದಾರೆ. ಮನೆಗೆ ಇಬ್ಬರಂತೆ ದೇಶ ಸೇವೆ ಮಾಡುತ್ತಿದ್ದೇವೆ. ನಿವೃತ್ತಿ ಹೊಂದಿದ್ದರೂ ಕೂಡ ಸೇವೆ ಸಲ್ಲಿಸಲು ಹುಮ್ಮಸ್ಸು ಇದೆ. ಸದ್ಯ ಡಿಸಿಸಿಸಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಎಸಿ ಕೋರರ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ. ಆಪರೇಷನ್ಗಳಲ್ಲಿ ಪಾಲ್ಗೊಳ್ಳದಿದ್ದರೂ ಕಣ್ಣಾರೆ ಕಂಡಿದ್ದೇವೆ. 300-400 ಜನರು ದೇಶ ಸೇವೆ ಮಾಡುತ್ತಿದ್ದಾರೆ" ಎಂದು ಹುರಿದುಂಬಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಟು ಲಂಡನ್: ರಾಣಿ ಚೆನ್ನಮ್ಮ ವಿವಿಯ 5 ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸದ ಅವಕಾಶ