ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ 10ಕ್ಕೂ ಅಧಿಕ ಗ್ರಾಮಗಳಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಬ್ಯಾಡಗಿ ತಾಲೂಕಿನ ಚಿನ್ನಿಕಟ್ಟಿ ಅರಣ್ಯ ಪ್ರದೇಶದಲ್ಲಿಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಚಿರತೆ ಬೋನಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ತಾಲೂಕು ಅರಣ್ಯಾಧಿಕಾರಿ ಮಹೇಶ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಪಶು ವೈದ್ಯರನ್ನು ಕರೆಸಿ ಚಿರತೆಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು.
ಆರು ವರ್ಷದ ಗಂಡು ಚಿರತೆ ಇದಾಗಿದ್ದು, ಆರೋಗ್ಯವಾಗಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಬಳಿಕ ಅರಣ್ಯ ಪ್ರದೇಶದಲ್ಲಿ ಬಿಡಲು ಚಿರತೆಯನ್ನು ಕರೆದ್ಯೊಯ್ಯಲಾಯಿತು. ಬೋನಿಗೆ ಬಿದ್ದ ಚಿರೆತಯನ್ನು ನೋಡು ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಆಗಮಿಸಿದ್ದರು.
ಓದಿ : 30 ವರ್ಷದಲ್ಲಿ 25 ಸಾವಿರಕ್ಕೂ ಹೆಚ್ಚು ಹಾವುಗಳ ರಕ್ಷಣೆ: ಮೂಕ ಜೀವ ಕಂಡು ಮರುಗುವ ದಯಾಮಯಿ
ಬ್ಯಾಡಗಿ ತಾಲೂಕಿನ ಕೆರವಡಿ, ಶಿಡೆನೂರು, ಚಿನ್ನಿಕಟ್ಟಿ ಮುತ್ತೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಚಿರತೆ ಇದೆ ಎಂಬ ವದಂತಿ ಹರಡಿತ್ತು. ಅಲ್ಲದೇ, ಚಿರತೆ ಹಲವು ಗ್ರಾಮಗಳಲ್ಲಿ ಕುರಿ, ನಾಯಿ, ಜಾನುವಾರುಗಳನ್ನು ಕೊಂದು ತಿಂದಿತ್ತು. ಈ ಹಿನ್ನೆಲೆ ಅರಣ್ಯ ಪ್ರದೇಶದಲ್ಲಿ ಬೋನ್ ಇರಿಸಲಾಗಿತ್ತು.
ಸದ್ಯ, ಮುಂಗಾರು ಹಂಗಾಮಿನ ಕಾಲ ರೈತರು ಕೃಷಿ ಚಟುವಟಿಕೆಗಳಿಗಾಗಿ ಜಮೀನುಗಳಲ್ಲಿ ಹೆಚ್ಚು ಇರುತ್ತಾರೆ. ಚಿರತೆ ಭಯದಿಂದ ರೈತರು ಜಮೀನುಗಳಿಗೆ ತೆರಳಲು ಆತಂಕಪಡುತ್ತಿದ್ದರು. ಇದೀಗ, ಬೋನಿಗೆ ಬಿದ್ದಿರುವುದರಿಂದ ಜನ ನಿಟ್ಟುಸಿರು ಬಿಡುವಂತಾಗಿದೆ.