ಹಾವೇರಿ: ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಮನೆ ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಗಳು ಹಬ್ಬದ ಮೆರುಗು ಹೆಚ್ಚು ಮಾಡಿದ್ದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣಗಳನ್ನ ಕಟ್ಟಲಾಗಿತ್ತು. ಈ ಎಲ್ಲ ಸಂಭ್ರಮಕ್ಕೆ ಕಾರಣ ಕಾಟೇನಹಳ್ಳಿಯಲ್ಲಿ ಶಿಕ್ಷಣ ಇಲಾಖೆ ಕಲಿಕಾ ಹಬ್ಬ ಆಯೋಜಿಸಿದ್ದು. ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಕಲಿಕಾ ಹಬ್ಬವನ್ನ ರದ್ದು ಮಾಡಲಾಗಿತ್ತು. ಆದರೆ ಪ್ರಸ್ತುತ ವರ್ಷ ಕೊರೊನಾ ಕರಿನೆರಳು ಇಲ್ಲದ ಕಾರಣ ಕಾಟೇನಹಳ್ಳಿಯಲ್ಲಿ ಕಲಿಕಾ ಹಬ್ಬ ಆಚರಿಸಲಾಯಿತು.
ಎರಡು ವರ್ಷ ಕೊರೊನಾದಿಂದ ಶಾಲೆ ಬಂದಾಗಿದ್ದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು. ಈ ಹಿನ್ನೆಲೆಯಲ್ಲಿ ಈ ವರ್ಷ ಕಲಿಕಾ ಚೇತರಿಕೆ ವರ್ಷ ಎಂದು ಘೋಷಣೆ ಮಾಡಲಾಗಿದ್ದು, ಕೊರೊನಾ ಸಮಯದಲ್ಲಿ ಸರಿಯಾಗಿ ವಿದ್ಯಾಭ್ಯಾಸ ಮಾಡದ ಮಕ್ಕಳಿಗೆ ಈ ವರ್ಷ ವಿಶೇಷ ಗಮನಕೊಟ್ಟು ಬೋಧನೆ ಮಾಡಲಾಗುತ್ತಿದೆ. ರೈತರ ಮನೆ ಮನೆಯಲ್ಲಿ ಎತ್ತುಗಳನ್ನ ಸಿಂಗಾರಮಾಡಲಾಗಿತ್ತು. ಸಿಂಗಾರ ಮಾಡಿದ ಎತ್ತುಗಳನ್ನ ಚಕ್ಕಡಿಗೆ ಕಟ್ಟಿ ಮೆರವಣಿಗೆ ಮಾಡಲಾಯಿತು.
ಸಾರೋಟದಲ್ಲಿ ಕೂರಿಸಿ ಮೆರವಣಿಗೆ : ಬಾರುಕೋಲು ಹಿಡಿದ ಶಾಲಾ ಮಕ್ಕಳು ರೈತರ ವೇಷ ಧರಿಸಿ ಗಮನ ಸೆಳೆದರು. ಚಕ್ಕಡಿಗಳನ್ನ ತಳಿರುತೋರಣಗಳಿಂದ ಬಲೂನ್‌ಗಳಿಂದ ಸಿಂಗರಿಸಲಾಗಿತ್ತು. ಜೊತೆಗೆ ಸರಸ್ವತಿ ದೇವಿ ಬಸವೇಶ್ವರ ವೇಷಧಾರಿಗಳನ್ನು ಸಾರೋಟದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ಸರ್ಕಾರಿ ಶಾಲೆಗಳ ಮಕ್ಕಳು ಪಾಲ್ಗೊಂಡ ಮೆರವಣಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿದ್ಯಾರ್ಥಿನಿಯರು ಲೈಜೀಮ್ ವಿದ್ಯಾರ್ಥಿಗಳ ಡಂಬಲ್ಸ್ ಪ್ರದರ್ಶನ ಆಕರ್ಷಣೀಯವಾಗಿತ್ತು.
ವಿದ್ಯಾರ್ಥಿಗಳು ಕೋಲಾಟ ಮತ್ತು ಡೊಳ್ಳು ಕುಣಿತದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಡೊಳ್ಳು ಕುಣಿತದ ಮಕ್ಕಳು ದೊಡ್ಡವರು ನಾಚುವಂತೆ ಕುಣಿದು ವಿವಿಧ ಮಜಲುಗಳನ್ನ ಬಾರಿಸುವ ಮೂಲಕ ಸಂಭ್ರಮಿಸಿದರು. ವಿದ್ಯಾರ್ಥಿಗಳ ಜೊತೆ ಸೇರಿದ ಶಿಕ್ಷಕರು, ಶಿಕ್ಷಕಿಯರು ಸಂಭ್ರಮದಲ್ಲಿ ಪಾಲ್ಗೊಂಡು ಕುಣಿಯುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಪೌರಾಣಿಕ ಪಾತ್ರಗಳು, ಸ್ವಾತಂತ್ರ್ಯ ಹೋರಾಟಗಾರ ಪಾತ್ರಧಾರಿಗಳು, ಶರಣರ ಪಾತ್ರಧಾರಿಗಳು ಗಮನ ಸೆಳೆದರು.
ನಟ ಪುನೀತ್ ರಾಜ್ಕುಮಾರ್ ಭಾವಚಿತ್ರ ಪ್ರದರ್ಶನ : ಈ ಕಲಿಕಾ ಹಬ್ಬದಲ್ಲಿ ಗ್ರಾಮಸ್ಥರು ಸಹ ಪಾಲ್ಗೊಂಡು ಸಂಭ್ರಮಿಸಿದರು. ಕುಂಭಹೊತ್ತ ವಿದ್ಯಾರ್ಥಿನಿಯರು ಮೆರವಣಿಗೆಗೆ ಮೆರುಗು ತಂದರು. 10 ಕ್ಕೂ ಅಧಿಕ ಚಕ್ಕಡಿಗಳಲ್ಲಿ ಭಾರತಾಂಬೆ, ಸರಸ್ವತಿ ಸೇರಿದಂತೆ ವಿವಿಧ ಗಣ್ಯರ ಭಾವಚಿತ್ರಗಳನ್ನ ಪ್ರದರ್ಶಿಸಲಾಯಿತು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಕಲಿಕಾ ವರ್ಷದ ಶುಭಾಶಯ ಕೋರಿದರು. ಒಂದು ಚಕ್ಕಡಿಯ ಮುಂದೆ ದಿವಂಗತ ನಟ ಪುನೀತ್ ರಾಜ್ಕುಮಾರ್ ಭಾವಚಿತ್ರ ಪ್ರದರ್ಶಿಸುವ ಮೂಲಕ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಾಲೆಗಳ ಎಸ್ಡಿಎಂಸಿ ಸಮಿತಿ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ನೃತ್ಯ ಮಾಡುವ ಮೂಲಕ ಆಚರಣೆಗೆ ಸಾಥ್ ನೀಡಿದರು. ಸಣ್ಣ ಚಕ್ಕಡಿಗೆ ಟಗರುಗಳನ್ನ ಕಟ್ಟಿ ಎಳೆಯಲಾಯಿತು. ಮಕ್ಕಳು ಹೋರಿಯ ಮುಖವಾಡ ಧರಿಸಿ ಚಕ್ಕಡಿ ಎಳೆದರು. ಲಂಬಾಣಿ ವೇಷಭೂಷಣ ಧರಿಸುವ ಕೆಲ ವಿದ್ಯಾರ್ಥಿಗಳು ಗಮನ ಸೆಳೆದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಸಹ ಹೆಜ್ಜೆ ಹಾಕಿ ಸಂಭ್ರಮಿಸಿದರು.
ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ : ಒಟ್ಟಾರೆಯಾಗಿ ಕಳೆದ ಎರಡು ವರ್ಷಗಳಿಂದ ಬಂದ್ ಆಗಿದ್ದ ಕಲಿಕಾ ಹಬ್ಬ ಈ ವರ್ಷದಲ್ಲಿ ಮೂರು ವರ್ಷದ ಹುಮ್ಮಸ್ಸು ಈ ಕಲಿಕಾ ಹಬ್ಬದಲ್ಲಿ ಕಂಡುಬಂತು. ವಿವಿಧ ವೇಷಧಾರಿಗಳು, ಭಾವಚಿತ್ರಗಳ ಪ್ರದರ್ಶನ ಜೊತೆಗೆ ಸರ್ಕಾರದ ಯೋಜನೆಗಳು ಬಿತ್ತಿಪತ್ರ ಪ್ರದರ್ಶನ ಗಮನ ಸೆಳೆಯಿತು. ಶಿಕ್ಷಕರು ಗ್ರಾಮಸ್ಥರು ವಿದ್ಯಾರ್ಥಿಗಳ ಜೊತೆ ಪಾಲ್ಗೊಂಡು ಸಂಭ್ರಮಿಸಿದರು. ಮೆರವಣಿಗೆಯ ನಂತರ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೇವಲ ಪಠ್ಯಗಳಲ್ಲಿ ಮುಳುಗುತ್ತಿದ್ದ ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕುಣಿದ ಕುಪ್ಪಳಿಸಿದರು.
ಇದನ್ನೂ ಓದಿ : 11 ವರ್ಷಗಳ ಬಳಿಕ ಹಕ್ಕಿ ಗಣತಿ: ಬಿಳಿಗಿರಿ ಬನದಲ್ಲಿ 274 ಪಕ್ಷಿ ಗುರುತು