ರಾಣೆಬೆನ್ನೂರು: ಕಳೆದ ನಾಲ್ಕು ವರ್ಷಗಳಿಂದ ಮಳೆಯಿಲ್ಲದೆ ರಾಣೇಬೆನ್ನೂರು ತಾಲೂಕಿನ ಕೆರೆ-ಕಟ್ಟೆಗಳು ನೀರಿಲ್ಲದೆ ಬರಡು ಭೂಮಿಯಂತೆ ಕಾಣುತ್ತಿದ್ದವು. ಆದರೆ, ಈ ಬಾರಿ ಉತ್ತಮ ಮಳೆಯಿಂದ ತನ್ನ ಒಡಲನ್ನು ತುಂಬಿಸಿಕೊಂಡ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ.
ರಾಣೇಬೆನ್ನೂರು ನಗರ ಸೇರಿ ತಾಲೂಕಿನಲ್ಲಿ ಸುಮಾರು 50ಕ್ಕೂ ಅಧಿಕ ಕೆರೆ-ಕಟ್ಟೆಗಳು ಭಾರಿ ಮಳೆಯಿಂದಾಗಿ ತುಂಬಿ ತುಳುಕುತ್ತಿವೆ. ನಗರದ ದೊಡ್ಡ ಕೆರೆ ಈಗಾಗಲೇ ತುಂಬಿದ್ದು, ಸದ್ಯ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಕೆರೆಯ ಸೌಂದರ್ಯ ನೋಡಲು ಜನರು ಬರುತ್ತಿದ್ದಾರೆ.
ರೈತರ ಜೀವನಾಡಿ ಎಂದು ಬಿಂಬಿತವಾಗಿರುವ ಮೇಡ್ಲೇರಿ ಕೆರೆ, ಅಸುಂಡಿ ಕೆರೆ, ಆರೇಮಲ್ಲಾಪುರ ಕೆರೆ, ಯಕಲಾಸಪುರ ಕೆರೆ, ರಾಹುತನಕಟ್ಟಿ ಹಳ್ಳ ಕೂಡ ತುಂಬಿವೆ. ಹೀಗಾಗಿ ರೈತ ಹಾಗೂ ಸಾರ್ವಜನಿಕರ ಮುಖದಲ್ಲಿ ಮಂದಹಾಸ ಮೂಡಿದೆ. ಕಳೆದ ನಾಲ್ಕು ವರ್ಷಗಳ ಸತತ ಬರಗಾಲದಿಂದ ರೈತರ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬತ್ತಿ ಹೋಗಿದ್ದವು. ಈಗ ಅಧಿಕ ಮಳೆಯಿಂದ ಕೊಳವೆ ಬಾವಿಗಳಲ್ಲಿ ನೀರು ತುಂಬಿದೆ. ರೈತರ ಬೆಳೆಗಳಿಗೆ ಭರಪೂರ ನೀರು ದೊರೆತಂತಾಗಿದೆ.