ರಾಣೆಬೆನ್ನೂರ: ಸತತ 32 ವರ್ಷಗಳ ಕಾಲ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಅಧಿಕಾರಿಯೊಬ್ಬರು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಹೌದು, ತಾಲೂಕಿನ ಕರೂರು ಗ್ರಾಮದ ಗುರುಬಸಯ್ಯ ಸಾಲಿಮಠ ಎಂಬುವರು 1990ರಿಂದ ಬಿಲ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆ ಪರಗಣಿಸಿದ ಸರ್ಕಾರ ಕಾರ್ಯದರ್ಶಿಯಾಗಿ ಪದೋನ್ನತಿ ನೀಡಿತ್ತು. ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ತಾಲೂಕಿನ ಶಿವನಿ ಗ್ರಾಮದಲ್ಲಿ 3 ವರ್ಷ, ಹರಿಹರ ತಾಲೂಕಿನ ಜಿಗಳಿ ಮತ್ತು ಸಾರಥಿ ಗ್ರಾಮದಲ್ಲಿ 8 ವರ್ಷ ಸೇವೆ ಸಲ್ಲಿಸಿ ಚನ್ನಗಿರಿ ತಾಲೂಕಿನಲ್ಲಿ ನಿವೃತ್ತಿ ಹೊಂದಿದರು.
ನಂತರ ತಮ್ಮ ಸ್ವಂತ ಗ್ರಾಮವಾದ ಕರೂರು ಗ್ರಾಮಕ್ಕೆ ಆಗಮಿಸಿ ಜೀವನ ಕೊಟ್ಟ ಗ್ರಾಮದ ಜನರಿಗೆ ಮತ್ತೆ ಕೆಲಸ ಮಾಡಬೇಕು ಎಂಬ ಉತ್ಸಾಹದಿಂದ ಗ್ರಾಪಂ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಗ್ರಾಮದ 4ನೇ ವಾರ್ಡ್ ಮತ್ತು 5ನೇ ವಾರ್ಡ್ನಿಂದ ಸ್ಪರ್ಧಿಸಿದ್ದಾರೆ.
ಗ್ರಾಮ ಪಂಚಾಯತ್ ಕಾರ್ಯದ ಬಗ್ಗೆ ಅಪಾರ ಅನುಭವ ಹೊಂದಿರುವ ಗುರುಬಸಯ್ಯನವರು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಮತ್ತು ಅಭಿವೃದ್ಧಿ ಮಾಡುವ ಛಲದೊಂದಿಗೆ ಮತ ಕೇಳುತ್ತಿದ್ದಾರೆ.