ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆ ದಾಸಶ್ರೇಷ್ಠ ಕನಕದಾಸರ ಕರ್ಮಭೂಮಿ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚನೆಯಾದಾಗಿನಿಂದ ಇಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ. ಪ್ರಾಧಿಕಾರ ಇದೀಗ ಕಾಗಿನೆಲೆ ಪರಿಸರಸ್ನೇಹಿ ಉದ್ಯಾನವನದಲ್ಲಿ ಪಾರಂಪರಿಕ ಮನೆ ನಿರ್ಮಿಸಿದೆ. ಪ್ರಾಚೀನ ಕಾಲದ ಮನೆಯ ಚಿತ್ರಣ ಕಲಾವಿದರ ಕೈ ಚಳಕದಲ್ಲಿ ಅನಾವರಣಗೊಂಡಿದೆ. ಮನೆಯಲ್ಲಿರುವ ಸಿಮೆಂಟ್ ಶಿಲ್ಪಗಳು ಗ್ರಾಮೀಣ ಜನಜೀವನವನ್ನು ತೆರೆದಿಡುತ್ತವೆ.
ಕನಕ ಪರಿಸರ ಸ್ನೇಹಿ ಉದ್ಯಾನವನವಂತೂ ಹಚ್ಚಹಸುರಿನಿಂದ ಕಂಗೊಳಿಸುತ್ತಿದೆ. ಹಸಿರು ತೊಟ್ಟ ಗಿಡಮರಗಳು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತವೆ. ಕನಕದಾಸರ ಪರಿಸರಸ್ನೇಹಿ ಉದ್ಯಾನವದಲ್ಲಿ ಓಡಾಡುವುದೇ ಮನಸ್ಸಿಗೆ ಮುದನೀಡುತ್ತದೆ. ಈ ಒತ್ತಡದ ಜೀವನದಲ್ಲಿ ಕೆಲ ಹೊತ್ತದಾದರೂ ರಿಲ್ಯಾಕ್ಸ್ ಆಗಬೇಕಾದರೆ ಈ ಉದ್ಯಾನವನಕ್ಕೆ ಬರಬೇಕು ಎನ್ನುತ್ತಾರೆ ಪ್ರವಾಸಿಗರು.
ಕಾಗಿನೆಲೆ ಬರುವ ಭಕ್ತರು, ಭಕ್ತ ಕನಕದಾಸರ ಗದ್ದುಗೆ ದರ್ಶನ ಮಾಡಿ ನಂತರ ಕನಕಗುರುಪೀಠಕ್ಕೆ ಭೇಟಿ ನೀಡುತ್ತಾರೆ. ಕಾಗಿನೆಲೆಯಲ್ಲಿ ಆದಿಕೇಶವ ದೇವಸ್ಥಾನ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ಉದ್ಯಾನವನಕ್ಕೆ ತೆರಳುತ್ತಾರೆ. ಕಾಗಿನೆಲೆ ಪ್ರವೇಶಿಸುವ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಮಹಾದ್ವಾರಗಳು ಕಾಗಿನೆಲೆಗೆ ಮತ್ತಷ್ಟು ಮೆರುಗು ನೀಡಿವೆ.