ಹಾವೇರಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಪೀಡಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು ಸ್ವಲ್ಪ ನೆಮ್ಮದಿ ತಂದಿದೆ. ಆದರೆ ಜಿಲ್ಲೆಯಲ್ಲಿ ಕೊರೊನಾದಿಂದ ಆಗುತ್ತಿರುವ ಮರಣಗಳ ಸಂಖ್ಯೆ ಜಿಲ್ಲೆಯ ಜನರನ್ನು ಚಿಂತೆಗೀಡು ಮಾಡಿದೆ.
ಕಳೆದ ವರ್ಷದ ಮೊದಲ ಅಲೆಯಲ್ಲಿ ಒಟ್ಟಾರೆ 195 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಆದರೆ ಎರಡನೇ ಅಲೆ ಆರಂಭವಾದ ನಂತರ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 57 ಕ್ಕೇರಿದೆ. ಮೊದಲ ಅಲೆಯಲ್ಲಿ ಜಿಲ್ಲೆಯಲ್ಲಿ ಒಂದು ದಿನ ಸಾವನ್ನಪ್ಪಿದ ದಾಖಲೆಯ ಪ್ರಮಾಣ 2, ಆದರೆ ಎರಡನೇಯ ಅಲೆಯಲ್ಲಿ ಒಂದೇ ದಿನ 12 ಜನರು ಮೃತಪಟ್ಟಿದ್ದಾರೆ.
ಮನೆಯಲ್ಲೇ ಅತಿಹೆಚ್ಚು ಸಾವಾಗುತ್ತಿದೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವರು ಹೆಚ್ಚು ಜನ ಸಾವಿಗೀಡಾಗುತ್ತಿದ್ದಾರೆ. ಜಿಲ್ಲೆಯ ಒಟ್ಟು ಸಾವುಗಳಲ್ಲಿ ಶೇ. 70 ರಷ್ಟು ಮನೆಗಳಲ್ಲೇ ಮೃತಪಡುತ್ತಿದ್ದಾರೆ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಈಗಾಗಲೇ ಸಿಎಂ ಜೊತೆ ಚರ್ಚಿಸಿದ್ದಾರೆ.
ಮನೆಯಲ್ಲಿ ಆಧುನಿಕ ತಂತ್ರಜ್ಞಾನವಿದ್ದರೆ ಮಾತ್ರ ಹೋಂ ಐಸೋಲೇಷನ್‌ಗೆ ಅವಕಾಶ ಕಲ್ಪಿಸಬೇಕು. ಸ್ವಲ್ಪ ಆರೋಗ್ಯದಲ್ಲಿ ಸಮಸ್ಯೆಯಾದರೂ ಸಹ ಆದಷ್ಟು ಬೇಗನೆ ವೈದ್ಯರನ್ನು ಕಾಣುವಂತೆ ಸೂಚಿಸಲಾಗಿದೆ. ಅಲ್ಲದೆ ಮನೆಯಲ್ಲಿ ಚಿಕಿತ್ಸೆ ಪಡೆಯುವವರ ಆರೋಗ್ಯವನ್ನು ದಿನಕ್ಕೆ ಮೂರು ಬಾರಿ ತಪಾಸಣೆ ನಡೆಸಬೇಕಿದೆ. ಅವರಿಗೆ ಸೂಕ್ತ ಔಷಧಿ ಆಹಾರ ಸಹ ಪೂರೈಸಬೇಕಿದೆ. ಜಿಲ್ಲಾಡಳಿತ ಮನೆಯಲ್ಲಿರುವ ರೋಗಿಗಳ ಆರೋಗ್ಯದ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂಬುದು ಸ್ಥಳೀಯರ ಅಭಿಪ್ರಾಯ.