ಹಾವೇರಿ: ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ವಿತರಿಸಬೇಕಿದ್ದ ಅಕ್ಕಿಯನ್ನು ಅಕ್ರಮವಾಗಿ ಬೇರೆಡೆಗೆ ಸಾಗಾಟ ಮಾಡುತ್ತಿದ್ದ ಗೂಡ್ಸ್ ಟೆಂಪೊವನ್ನು ರಟ್ಟೀಹಳ್ಳಿಯಲ್ಲಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಸಂಬಂಧ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹಿರೇಕಲ್ಮಠದ ರುದ್ರೇಶ ಮತ್ತು ಗೊಲ್ಲರಹಳ್ಳಿಯ ನಾಗರಾಜ ಎಂಬುವವರನ್ನು ರಟ್ಟೀಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಒಂದು ಗೂಡ್ಸ್ ವಾಹನ ಮತ್ತು 50 ಕೆ.ಜಿ ತೂಕದ ಎಪ್ಪತ್ತು ಪ್ಯಾಕೇಟ್ ಅಕ್ಕಿ ಮೂಟೆಗಳನ್ನು ಜಪ್ತಿ ಮಾಡಲಾಗಿದೆ.
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನಂತರ ಸ್ಥಳಕ್ಕೆ ಧಾವಿಸಿದ ಆಹಾರ ನಿರೀಕ್ಷಕ ಚಂದ್ರಶೇಖರ ಹದ್ದಳ್ಳಿ ಅವರು ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸಿಪಿಐ ಮಂಜುನಾಥ ನೇತೃತ್ವದ ತಂಡ ದಾಳಿ ನಡೆಸಿತು.