ರಾಣೆಬೆನ್ನೂರು: ನನ್ನ ಮೇಲೆ ದಾಖಲಾಗಿರುವ ಕೇಸುಗಳು ಕೇವಲ ರಾಜಕೀಯ ಪ್ರೇರಿತ. ನಿನ್ನೆ ಈ ಬಗ್ಗೆ ಜಿಲ್ಲಾಧ್ಯಕ್ಷರು ಸ್ಪಷ್ಟನೆ ನೀಡಿದ್ದು, ಇದಕ್ಕೆ ಅವರೇ ಉತ್ತರಿಸಲಿದ್ದಾರೆ. ಇಂಥ ಕೇಸುಗಳಿಗೆ ನಾನು ಹೆದರುವುದಿಲ್ಲ ಎಂದು ರಾಣೆಬೆನ್ನೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ದಾಖಲಾಗಿರುವ ಕೇಸುಗಳು ವಿರೋಧ ಪಕ್ಷದವರ ಷಡ್ಯಂತ್ರವಷ್ಟೇ. ಉಪಚುನಾವಣೆ ವೇಳೆ ಕೇಸು ದಾಖಲಾಗಿದೆ ಅಂದ್ರೆ, ಇದೊಂದು ರಾಜಕೀಯ ಪ್ರೇರಿತ ಎಂಬುದು ಎಲ್ಲರಿಗೂ ಗೊತ್ತಾಗುತ್ತೆ. ಆರೋಪ ಮಾಡಲಾಗಿದೆ ಎಂದ ಮಾತ್ರಕ್ಕೆ ನನಗೇನು ಶಿಕ್ಷೆಯಾಗಿಲ್ಲವಲ್ಲ, ಇದೆಲ್ಲಾ ಸತ್ಯಕ್ಕೆ ದೂರವಾಗಿರುವಂತದ್ದು. ಯಾವುದೇ ಆರೋಪ ಬಂದ್ರೂ ಧೈರ್ಯವಾಗಿ ಎದುರಿಸುತ್ತೇನೆ ಎಂದು ಪೂಜಾರಿ ಹೇಳಿದ್ರು.
ಆರ್. ಶಂಕರ್ ಅನರ್ಹರಾಗಿದ್ದಾರೆ, ಅವರು ನಿಮ್ಮ ಬೆಂಬಲಕ್ಕೆ ಬರುತ್ತಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೂ ನಾಳೆ ಅವರು ಪ್ರಚಾರಕ್ಕೆ ಬರುತ್ತಾರೆ. ಈಗಾಗಲೇ ಬೆಂಬಲವನ್ನು ಸೂಚಿಸಿದ್ದು, ನಮ್ಮ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.