ಹಾವೇರಿ: ಬೇರು ರೋಗ ಮತ್ತು ವರುಣನ ಕಣ್ಣಾಮುಚ್ಚಾಲೆಯಿಂದ ಬೆಳ್ಳುಳ್ಳಿ ಬೆಳೆದ ರೈತರು ಆತಂಕಕ್ಕೀಡಾಗಿದ್ದಾರೆ. ಲಾಭವಿರಲಿ ಹಾಕಿದ ಬಂಡವಾಳ ವಾಪಸ್ ಬರುತ್ತದೋ ಇಲ್ಲವೋ ಎನ್ನುವ ಸಂಶಯ ಈಗ ಜಿಲ್ಲೆಯ ರೈತರನ್ನು ಕಾಡುತ್ತಿದೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ರೈತರು ಪ್ರತಿ ವರ್ಷ ಈರುಳ್ಳಿ, ಬೆಳ್ಳುಳ್ಳಿ ಬೆಳೆಯುತ್ತಾರೆ. ಅದರಲ್ಲೂ ರಾಣೆಬೆನ್ನೂರು ತಾಲೂಕಿನ ಇಟಗಿ ಗ್ರಾಮದ ಸುತ್ತಮುತ್ತ ಸಾಕಷ್ಟು ಪ್ರಮಾಣದಲ್ಲಿ ರೈತರು ಬೆಳ್ಳುಳ್ಳಿ ಬೆಳೆ ಬೆಳೆದು ಜೀವನ ಸಾಗಿಸುತ್ತಾರೆ. ಕಳೆದ ವರ್ಷ ಅಧಿಕ ಲಾಭ ಬಂದ ಕಾರಣ ಪ್ರಸ್ತುತ ವರ್ಷ ಅಧಿಕ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆದಿದ್ದಾರೆ. ಆದ್ರೆ ಅಗತ್ಯವಿರುವಾಗ ಮಳೆ ಬರದಿರುವುದು ಮತ್ತು ಮಳೆ ಬೇಡವಾದಾಗ ಅಧಿಕವಾಗಿ ಸುರಿದ ಕಾರಣ ಸದ್ಯ ಬೆಳ್ಳುಳ್ಳಿಗೆ ಮಾರಕವಾಗಿದೆ. ಪರಿಣಾಮ ಜಿಲ್ಲೆಯಲ್ಲಿ ಬೆಳ್ಳುಳ್ಳಿ ಬೇರು ರೋಗದಿಂದ ಸರಿಯಾಗಿ ಗಡ್ಡೆಯಾಗಿಲ್ಲ.
ಎಕರೆಗೆ ಕ್ವಿಂಟಾಲ್ಗಟ್ಟಲೆ ಬೀಜ ತಂದು ಬಿತ್ತನೆ ಮಾಡಲಾಗಿದೆ. ಬಿತ್ತನೆ, ಕಳೆ ಕೀಳಲು, ಗೊಬ್ಬರ ಹಾಕಲು, ಕ್ರಿಮಿನಾಶಕ ಸಿಂಪಡಣೆ ಅಂತಾ ಸಹಸ್ರಾರು ರೂಪಾಯಿ ಖರ್ಚು ಮಾಡಲಾಗಿದೆ. ಕಳೆದ ವರ್ಷ ಉತ್ತಮ ಫಲ ಸಿಕ್ಕಿತ್ತು. ಆದ್ರೆ ಈ ಬಾರಿ ಹಾಕಿದ ಬಂಡವಾಳವಾದರೂ ವಾಪಸ್ ಬಂದ್ರೆ ಸಾಕು ಅಂತಾರೆ ರೈತರು.