ಹಾವೇರಿ: ಹಲವು ಇಲ್ಲಗಳ ನಡುವೆ ಸಹ ಹಾವೇರಿ ಜಿಲ್ಲಾಸ್ಪತ್ರೆ ರಾಷ್ಟ್ರಮಟ್ಟದಲ್ಲಿ ಲಕ್ಷ್ಯಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 2023 ಮತ್ತು 24 ನೇ ಸಾಲಿನ ಪ್ರಶಸ್ತಿಯನ್ನು ಹಾವೇರಿ ಜಿಲ್ಲಾಸ್ಪತ್ರೆ ತನ್ನದಾಗಿಸಿಕೊಂಡಿದೆ. ಹೆರಿಗೆ ವಿಭಾಗ ನೀಡುತ್ತಿರುವ ಸೇವೆಗೆ ಮತ್ತು ದಿನ 24 ಗಂಟೆ ನೀಡುವ ಸೇವೆಗೆ ಹಾವೇರಿ ಜಿಲ್ಲಾಸ್ಪತ್ರೆ ರಾಷ್ಟ್ರಮಟ್ಟದ ಲಕ್ಷ್ಯಪ್ರಶಸ್ತಿಗೆ ಭಾಜನವಾಗಿದೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳು 500 ಹೆರಿಗೆಗಳಾಗುತ್ತಿದ್ದು, ಅದರಲ್ಲಿ 250 ಕ್ಕೂ ಅಧಿಕ ಹೆರಿಗೆಗಳು ಶಸ್ತ್ರಚಿಕಿತ್ಸೆ ಮೂಲಕ ನಡೆಯುತ್ತಿವೆ. ಆ ಎರಡು ವಿಭಾಗದಲ್ಲಿ ಜಿಲ್ಲಾಸ್ಪತ್ರೆ ನೀಡುವ ಸೇವೆ ಗುಣಮಟ್ಟ ನೋಡಿ ಈ ಪ್ರಶಸ್ತಿ ನೀಡಲಾಗುತ್ತಿದೆ. ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗದಲ್ಲಿ ಸಹ ಹಾವೇರಿ ಜಿಲ್ಲಾಸ್ಪತ್ರೆ ಗುಣಮಟ್ಟದ ಸೇವೆ ನೀಡುತ್ತಿದೆ.
ಹೆರಿಗೆ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿ ನಿತ್ಯ 8 ರಿಂದ 10 ಕೃತಕ ಹೆರಿಗೆ ಮಾಡಿಸಲಾಗುತ್ತಿದೆ. ಕೆಲವೊಂದು ಮೊದಲೇ ಗುರುತಿಸಲಾಗಿರುತ್ತದೆ ಇನ್ನು ಕೆಲವೊಂದು ತುರ್ತಾಗಿ ಕೃತಕ ಹೆರಿಗೆ ಒಳಗಾಗುತ್ತದೆ. ಈ ವಿಭಾಗದಲ್ಲಿ 8 ಜನ ಸ್ತ್ರೀರೋಗ ತಜ್ಞರಿದ್ದಾರೆ. 7 ಜನ ಅರವಳಿಕೆ ಮತ್ತ 5 ವೈದ್ಯರು ಮಕ್ಕಳ ತಜ್ಞರಿದ್ದಾರೆ.
ಇಬ್ಬರು ರೆಡಿಯಾಲಿಜಿಸ್ಟ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಗುಣಮಟ್ಟದ ಸೇವೆ ನೀಡಿದ್ದಕ್ಕೆ ಜಿಲ್ಲಾಸ್ಪತ್ರೆಗೆ ಈ ಪ್ರಶಸ್ತಿ ದೊರೆತಿದೆ. ಹಾವೇರಿ ಜಿಲ್ಲೆಯ 8 ತಾಲೂಕುಗಳಿಂದ ಗರ್ಭಿಣಿಯರು ಹಾವೇರಿ ಜಿಲ್ಲಾಸ್ಪತ್ರೆಗೆ ಆಗಮಿಸಿ ಹೆರಿಗೆ ಸೇವೆ ಪಡೆಯುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾರತ ಸರ್ಕಾರದ ಹೆರಿಗೆ ವಿಭಾಗದಲ್ಲಿ ಗುಣಮಟ್ಟದ ಸೇವೆಗೆ ಲಕ್ಷ್ಯ ಕಾರ್ಯಕ್ರಮದಡಿ ರಾಷ್ಟ್ರಪ್ರಶಸ್ತಿ ನೀಡಲಾಗುತ್ತಿದೆ. ಲಕ್ಷ್ಯ ಕಾರ್ಯಕ್ರಮದ ಮುಖ್ಯ ಉದ್ದೇಶ ಗುಣಮಟ್ಟದ ಸೇವೆ ನೀಡುವ ಮೂಲಕ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗುವಿನ ಮರಣ ಕಡಿಮೆ ಮಾಡುವುದಾಗಿದೆ.
ಹೆರಿಗೆ ಕೊಠಡಿ ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಜಿಲ್ಲಾಮಟ್ಟದ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ತಂಡಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಮೂರು ಹಂತದಲ್ಲಿ ಮೂರು ತಂಡಗಳು ಮೌಲ್ಯಮಾಪನ ಮಾಡುತ್ತವೆ. ಈ ತಂಡಗಳ ಮೌಲ್ಯಮಾಪನದಲ್ಲಿ ಪ್ರತಿಶತ 70 ಕ್ಕಿಂತ ಅಧಿಕ ಅಂಕ ಪಡೆದ ಆಸ್ಪತ್ರೆಗಳಿಗೆ ರಾಷ್ಟ್ರಮಟ್ಟದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಹಾವೇರಿ ಜಿಲ್ಲಾಸ್ಪತ್ರೆಗೆ ಮಾರ್ಚ್ 03 ಮತ್ತು 04 ರಂದು ಭೇಟಿ ನೀಡಿದ್ದ ಮೌಲ್ಯಮಾಪನ ತಂಡಗಳು ಪ್ರತಿಶತ 85 ಕ್ಕಿಂತ ಅಧಿಕ ಅಂಕ ನೀಡಿವೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳು 500 ಕ್ಕೂ ಅಧಿಕ ಹೆರಿಗೆಗಳಾಗುತ್ತಿದ್ದು, ಅದರಲ್ಲಿ ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಇದೆ. ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 300 ಕ್ಕೂ ಅಧಿಕ ವಿವಿಧ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಶಸ್ತಿಗೆ ಲಭಿಸಿರುವುದಕ್ಕೆ ಹಾವೇರಿ ಜಿಲ್ಲಾಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಪರಮೇಶ್ ಹಾವನೂರು ಸಂತಸ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಹಾವೇರಿ ಜಿಲ್ಲಾಡಳಿತ ಮತ್ತು ಜಿಲ್ಲಾಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿ ಪರಿಶ್ರಮ ಕಾರಣವಾಗಿದೆ ಎಂದು ಹಾವನೂರು ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಗೆ ಈ ಪ್ರಶಸ್ತಿ ಆಯ್ಕೆಯಾಗಿದ್ದಕ್ಕೆ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲಾಸ್ಪತ್ರೆಯ ಈ ಪ್ರಶಸ್ತಿಗೆ ಸರ್ಕಾರದಿಂದ ಪ್ರತಿವರ್ಷ ಆರು ಲಕ್ಷ ರೂಪಾಯಿ ನೀಡಲಾಗುತ್ತದೆ. ಆ ಹಣವನ್ನು ಜಿಲ್ಲಾಸ್ಪತ್ರೆ ಹೆರಿಗೆ ಕೊಠಡಿಗೆ ಮತ್ತು ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿಗೆ ಬಳಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Shakti Scheme: ಶಕ್ತಿ ಯೋಜನೆಗೆ ಸಿಗ್ತಿದೆ ಉತ್ತಮ ಸ್ಪಂದನೆ: ಮಹಿಳೆಯರು, ಮಕ್ಕಳ ಸುರಕ್ಷತೆಗೆ ಗಮನಹರಿಸಲು ಮನವಿ