ಹಾವೇರಿ: ಸತತ 21 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸೇನಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧನನ್ನು ಹಾವೇರಿ ತಾಲೂಕಿನ ಸಂಗೂರಿನ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.
ಸಂಗೂರಿನ ಗ್ರಾಮದಿಂದ ಸೇನೆಗೆ ಸೇರಿದ ಶ್ರೀನಿವಾಸ್ ಯರೇಶಿಮಿ ಅವರು 21 ವರ್ಷಗಳಿಂದ ಸಿಆರ್ಪಿಎಫ್ನಲ್ಲಿ ಯೋಧನಾಗಿ ಸೇವೆ ಮಾಡಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಗ್ರಾಮದ ಜನರು ಭವ್ಯ ಸ್ವಾಗತ ಕೋರಿದರು.
ಹಾವೇರಿಯ ಹುಕ್ಕೇರಿಮಠದಿಂದ ತೆರೆದ ವಾಹನದಲ್ಲಿ ಶ್ರೀನಿವಾಸ್ ಅವರನ್ನು ಮೆರವಣಿಗೆ ಮಾಡಲಾಯಿತು. ಹುಕ್ಕೇರಿಮಠದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಶ್ರೀನಿವಾಸ್ಗೆ ದೇಶ ಪ್ರೇಮಿಗಳು ಪರಸ್ಪರ ಹಸ್ತಲಾಘವ ಮಾಡಿ ಶುಭಾಶಯ ಕೋರಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ನಿವೃತ್ತ ಯೋಧರು ಹಾರಹಾಕಿ ಸ್ವಾಗತಿಸಿದರು.
ಮೆರವಣಿಗೆಯಲ್ಲಿ ಶ್ರೀನಿವಾಸ್ ಅವರ ಸಂಬಂಧಿಕರು, ಸಂಗೂರಿನ ಅಭಿಮಾನಿಗಳು ಮತ್ತು ದೇಶಪ್ರೇಮಿಗಳು ಪಾಲ್ಗೊಂಡಿದ್ದರು. ಮೆರವಣಿಗೆ ಉದ್ದಕ್ಕೂ ಪಟಾಕಿ ಸಡಿಸಿ ಸಂಭ್ರಮಿಸಿದ ಗ್ರಾಮಸ್ಥರ ಉತ್ಸಾಹಕ್ಕೆ ಜಾಂಜ್ ಮೇಳ ಮತ್ತಷ್ಟು ಮೆರುಗು ನೀಡಿತು. ನಂತರ ಸ್ವಾತಂತ್ರ್ಯ ಹೋರಾಟಗಾರ ಸಂಗೂರಿ ಕರಿಯಪ್ಪ ವೃತ್ತಕ್ಕೆ ಆಗಮಿಸಿದ ಶ್ರೀನಿವಾಸ್ ಕರಿಯಪ್ಪ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಹಾವೇರಿಯ ಮುಸ್ಲಿಂ ಬಾಂಧವರು ಶ್ರೀನಿವಾಸಗೆ ಕೇಕ್ ತಿನ್ನಿಸಿ ಸಂಭ್ರಮಿಸಿದರು.
ಸ್ವಾತಂತ್ರ ಹೋರಾಟಗಾರ ಸಂಗೂರು ಕರಿಯಪ್ಪ ಅವರ ಮೊಮ್ಮಗ:
ಯೋಧ ಶ್ರೀನಿವಾಸ್ ಸ್ವಾತಂತ್ರ ಹೋರಾಟಗಾರ ಸಂಗೂರು ಕರಿಯಪ್ಪರ ಅವರ ಮೊಮ್ಮಗ. ಶ್ರೀನಿವಾಸ್ ತಂದೆ ಗುಡ್ಡಪ್ಪ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 21 ವರ್ಷಗಳ ಹಿಂದೆ ಯೋಧನಾಗಿ ಸೇರ್ಪಡೆಯಾದ ಇವರು ಶ್ರೀನಗರ, ಆಂಧ್ರಪ್ರದೇಶ ಹಾಗೂ ಇಂಫಾಲ್ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಶ್ರೀನಿವಾಸ್, ಅಭಿಮಾನಿಗಳು ಮತ್ತು ಸಂಬಂಧಿಕರು ತೋರಿಸಿದ ಅಭಿಮಾನಕ್ಕೆ ಧನ್ಯವಾದ ಅರ್ಪಿಸಿದರು. ನಾವು ಸಹ ಸೇನೆಯಲ್ಲಿರುವ ಯೋಧರಷ್ಟೇ ದೇಶ ಸೇವೆ ಮಾಡುತ್ತೇವೆ. ಆದರೆ, ಪ್ಯಾರಾಮಿಲಿಟರಿಯಲ್ಲಿ ಒಂದಾದ ಸಿಆರ್‌ಪಿಎಫ್ ಯೋಧರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಸೇನೆಯಲ್ಲಿ ಸೇವೆ ಸಲ್ಲಿಸಿದ ಯೋಧರಿಗೆ ನೀಡಿರುವ ಸೌಲಭ್ಯಗಳನ್ನು ನಮಗೂ ನೀಡಬೇಕು. ನಮಗೆ ನೌಕರಿ ರಿಯಾಯಿತಿ ಸೇರಿದಂತೆ ವಿವಿಧ ಸೌಲಭ್ಯ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: ಬೆಂಗಳೂರು ಸಿಲಿಂಡರ್ ಸ್ಫೋಟ ಪ್ರಕರಣ: ಸಮಯ ಪ್ರಜ್ಞೆಯಿಂದ ಬದುಕುಳಿದ ಕುಟುಂಬ