ಹಾವೇರಿ: ಬಿಜೆಪಿಯು ಸಂಘಟನೆ ದೃಷ್ಟಿಯಿಂದ ಅತ್ಯಂತ ಬಲಿಷ್ಟವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಮಾತನಾಡಿದ ಅವರು, "ಪ್ರತಿಪಕ್ಷ ನಾಯಕ ಯಾರಾಗ್ತಾರೆ? ರಾಜ್ಯಾಧ್ಯಕ್ಷ ಯಾರಾಗ್ತಾರೆ? ಅನ್ನೋದನ್ನು ಯೋಚನೆ ಮಾಡದೇ ಲಕ್ಷಾಂತರ ಕಾರ್ಯಕರ್ತರು ಈ ದೇಶಕ್ಕೆ ಒಳ್ಳೆಯದಾಗಬೇಕು. ನಮೋ ಪ್ರಧಾನಿ ಆಗಬೇಕು ಅನ್ನೋ ದೃಷ್ಟಿಯಿಂದ ಕಾಯ್ತಾ ಇದ್ದಾರೆ. ಇಡೀ ರಾಜ್ಯದಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. 28ಕ್ಕೆ 28 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಲೋಕಸಭಾ ಚುನಾವಣೆ ಎದುರಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಜನರನ್ನು ಒಂದು ಸಲ ಮೋಸ ಮಾಡಬಹುದು. ಆದರೆ ಮತ್ತೆ ಮತ್ತೆ ಮೋಸ ಮಾಡಲು ಆಗುವುದಿಲ್ಲ. ಇದು ಮೋಸದ ಗ್ಯಾರಂಟಿ ಅಂತ ಜನರಿಗೆ ಈಗಾಗಲೇ ಅರ್ಥ ಆಗಿದೆ. ಜನರು ಲೋಕಸಭಾ ಚುನಾವಣೆಗಾಗಿ ಕಾಯ್ತಾ ಇದ್ದಾರೆ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಉತ್ಸುಕರಾಗಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ನರೇಂದ್ರ ಮೋದಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಹೀಗಾಗಿ ಅವರು ಖಂಡಿತ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ" ಎಂದು ಭವಿಷ್ಯ ನುಡಿದರು.
"ರಾಜ್ಯ ಸರ್ಕಾರ ನೂರು ದಿನ ಪೂರೈಸಿರೋ ಲೆಕ್ಕಾ ಮಾತ್ರ ಇದೆ. ಆದರೆ ಒಬ್ಬನೇ ಒಬ್ಬ ಮಂತ್ರಿ ತಾವು 100 ದಿನದಲ್ಲಿ ಏನು ಮಾಡಿದ್ದೀವಿ ಎಂದು ಹೇಳುತ್ತಿಲ್ಲ. ರಾಜ್ಯದಲ್ಲಿ ಸಿಕ್ಕಾಪಟ್ಟೆ ಬರಗಾಲ ಇದೆ. ಯಾವೊಬ್ಬ ಜಿಲ್ಲಾ ಉಸ್ತುವಾರಿ ಸಚಿವ ಗ್ರಾಮಗಳಿಗೆ ಭೇಟಿ ಕೊಟ್ಟಿಲ್ಲ. ಒಂದೇ ಒಂದು ಬೋರ್ವೆಲ್ ಕೊರೆಸಿಲ್ಲ. ಟ್ಯಾಂಕರ್ಗಳ ಮೂಲಕ ನೀರು ತರಿಸಿಕೊಟ್ಟಿಲ್ಲ. ಅನೇಕ ಜಿಲ್ಲಾ ಉಸ್ತುವಾರಿ ಸಚಿವರು ಅವರ ಜಿಲ್ಲೆಯ ಮುಖ ಕೂಡ ನೋಡಿಲ್ಲ" ಎಂದು ಆರೋಪಿಸಿದರು.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕೆ.ಈ ಕಾಂತೇಶ್ ಸ್ಪರ್ಧೆಗೆ ಬಿ.ಸಿ ಪಾಟೀಲ ವಿರೋಧ ವಿಚಾರ ಕುರಿತಂತೆ ಮಾತನಾಡಿದ ಅವರು, "ಯಾರ ಹತ್ತಿರ ಮಾತಾಡಬೇಕೋ ಅವರ ಹತ್ತಿರ ಮಾತಾಡಿನೇ ನಾನು ಜಿಲ್ಲೆಗೆ ಭೇಟಿ ಕೊಟ್ಟಿದ್ದು. ನಾನು ಯಾವುದೇ ಮತದಾರರನ್ನು ಭೇಟಿ ಮಾಡಿಲ್ಲ. ಆದರೆ, ಜಿಲ್ಲೆಯ ಎಲ್ಲಾ ಸಾಧು ಸಂತರ ಆಶೀರ್ವಾದ ತೆಗೆದುಕೊಂಡಿದ್ದೇನೆ. ಬಿ.ಸಿ ಪಾಟೀಲ ನನ್ನ ಸ್ನೇಹಿತರು. ಅವರ ಜೊತೆ ಕೂತು ಮಾತನಾಡುತ್ತೇನೆ" ಎಂದು ಹೇಳಿದರು.
ಕಾವೇರಿ ನೀರು ತಮಿಳುನಾಡಿಗೆ ಹರಿಸೋ ಬಗ್ಗೆ.. "ರಾಜ್ಯದ ರೈತರಿಗೆ ಕುಡಿಯೋಕೆ ನೀರಿಲ್ಲ. ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡೋದ್ರಲ್ಲಿ ಅರ್ಥವೇ ಇಲ್ಲ. ರಾಜ್ಯದ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ನಡೆಸಿದ್ದಾರೆ. ಸರ್ವಪಕ್ಷ ನಿಯೋಗ ದೆಹಲಿಗೆ ಕರೆದೊಯ್ಯೋದಾಗಿ ಹೇಳಿದ್ದಾರೆ. ಆದರೆ ಅಲ್ಲಿ ಎಷ್ಟರ ಮಟ್ಟಿಗೆ ಪರಿಹಾರ ಸಿಗುತ್ತೆ, ಇಲ್ಲವೋ ಪ್ರಶ್ನೆ ಬೇರೆ. ಆದರೆ ರಾಜ್ಯ ಸರ್ಕಾರ ನಮ್ಮ ರೈತರಿಗೆ ನೀರು ಸಿಗೋವರೆಗೆ ತಮಿಳುನಾಡಿಗೆ ನೀರು ಬಿಡಲ್ಲ ಅಂತ ತೀರ್ಮಾನ ಮಾಡಬೇಕು. ಈ ತೀರ್ಮಾನ ತಗೊದುಕೊಳ್ಳಲಿಲ್ಲವೆಂದರೆ, ರಾಜ್ಯದ ರೈತರಿಗೆ ದ್ರೋಹ ಮಾಡಿದ ಹಾಗೆ" ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ನಿಂದ ಆಪರೇಷನ್ ಹಸ್ತ ವಿಚಾರ: "ಕಾಂಗ್ರೆಸ್ನವರು ತಿಪ್ಪರಲಾಗಾ ಹೊಡೆದರೂ ಬಿಜೆಪಿಯವರು ಯಾರೂ ಕಾಂಗ್ರೆಸ್ಗೆ ಹೋಗಲ್ಲ. ಅವರ 17 ಜನ ಶಾಸಕರನ್ನೇ ಉಳಿಸಿಕೊಳ್ಳದೇ, ಹಿಂದೆ ಸರ್ಕಾರವನ್ನೇ ಕಳೆದುಕೊಂಡರು" ಎಂದು ವ್ಯಂಗ್ಯವಾಡಿದರು. "ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಹೇಳ್ತಾ ಇದ್ದಾರೆ. ಬಿಜೆಪಿ ಅರ್ಧ ಖಾಲಿ ಆಗುತ್ತೆ, ಅವರು ಬರ್ತಾರೆ ಇವರು ಬರ್ತಾರೆ ಅಂತ. ಆದರೆ ಇನ್ನೊಂದು ಕಡೆ ಬಿಜೆಪಿ ಕಾಲದ ಹಗರಣ ತನಿಖೆ ಮಾಡ್ತೀವಿ ಅಂತ ಬ್ಲಾಕ್ ಮೇಲ್ ಮಾಡ್ತಿದಾರೆ. ನಾನು ಸವಾಲು ಹಾಕ್ತಿದಿನಿ, ನಿಮ್ಮ ಕೈಯಲ್ಲಿ ತಾಕತ್ತಿದ್ದರೆ, ಒಂದೇ ಒಂದು ಕೇಸು ತನಿಖೆ ಮಾಡಿಸಿ" ಎಂದು ಸವಾಲು ಹಾಕಿದರು.
"ಯಾವುದಾದರೂ ಇಲಾಖೆಯ ಯಾವುದೇ ಒಂದೇ ಒಂದು ಕೇಸು ಯಾರಾದರೂ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸಿ. ನಿಮ್ಮ ಬ್ಲಾಕ್ಮೇಲ್ಗೆ ಬಿಜೆಪಿಯ ಯಾವುದೇ ಒಬ್ಬ ಕಾರ್ಯಕರ್ತನೂ ಹೆದರಲ್ಲ. ಇವರು ಬ್ಲಾಕ್ ಮೇಲ್ ಮಾಡಿ ಕರೆಸಿಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ. ಯಾರೋ ಒಬ್ರೋ ಇಬ್ರೋ ಕಾಂಗ್ರೆಸ್ಗೆ ಹೋದರೆ, ಕಾಂಗ್ರೆಸ್ನಿಂದ ಎಷ್ಟು ಜನ ಬಿಜೆಪಿಗೆ ಬರ್ತಾರೆ ನೀವೇ ನಿಮ್ಮ ಕಣ್ಣಿಂದ ನೋಡುವಿಯರಂತೆ" ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ನಾಡಹಬ್ಬ ದಸರಾ ಉದ್ಘಾಟಿಸಲಿರುವ ಹಂಸಲೇಖ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ