ಹಾವೇರಿ: ಕುಮುದ್ವತಿ ಮತ್ತು ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಮತ್ತು ರಾಣೇಬೆನ್ನೂರು ತಾಲೂಕಿನ ಹಲವು ಗ್ರಾಮಗಳು ಜಲಾವೃತವಾಗಿವೆ.
ರಟ್ಟೀಹಳ್ಳಿ ತಾಲೂಕಿನ ಮಳಗಿ, ಕುಡುಪಲಿ, ತೋಟಗಂಟಿ, ಯಡಗೋಡ, ಮಾಸೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳು ಜಲಾವೃತಗೊಂಡಿವೆ. ಮತ್ತೊಂದೆಡೆ ರಾಣೇಬೆನ್ನೂರು ತಾಲೂಕಿನ ಹರನಗಿರಿ, ಚಂದಾಪುರ, ಊದಗಟ್ಟಿ, ಕುಪ್ಪೇಲೂರು, ಹಿರೇಮಾಗನೂರು, ಮುಷ್ಟೂರು, ಮಾಗನೂರು ಸೇರಿದಂತೆ ಹಲವು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ.
ಮನೆಗಳಿಗೆ ನೀರು ಆವರಿಸಿರುವುದರಿಂದ ಜನರು ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಚಕ್ಕಡಿ, ತೆಪ್ಪದ ಮೂಲಕ ಮನೆ ಖಾಲಿ ಮಾಡುತ್ತಿದ್ದಾರೆ. ಸಾವಿರಾರು ಹೆಕ್ಟೇರ್ ಜಮೀನಿನಲ್ಲಿ ಬೆಳೆದಿದ್ದ ಹತ್ತಿ, ಮೆಕ್ಕೆಜೋಳ, ಶೇಂಗಾ, ಸೋಯಾಬಿನ್, ಕಬ್ಬು, ಬಾಳೆ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.