ರಾಣೆಬೆನ್ನೂರು: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ 13 ಅಭ್ಯರ್ಥಿಗಳಲ್ಲಿ ಗುರುವಾರ 4 ಜನ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಅಂತಿಮವಾಗಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಹನುಮಂತಪ್ಪ ಕಬ್ಬಾರ್, ಜಗದೀಶ್ ಯಲಿಗಾರ, ಮೌಲಾಸಾಬ ಹಿತ್ತಲಮನಿ, ಹನುಮಂತರಾಜು ಚನ್ನಗೌಡ್ರ ನಾಮಪತ್ರ ವಾಪಸ್ ಪಡೆದಿದ್ದಾರೆ.
ಇನ್ನು ಅಂತಿಮವಾಗಿ ಕಣದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ, ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಹಲಗೇರಿ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ನಾಗಪ್ಪ ಸಂಶಿ, ಯುವ ಕರ್ನಾಟಕ ಪಕ್ಷದ ಗೌತಮ ಕಂಬಳಿ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಪವನಕುಮಾರ್ ಎಂ.ಎಸ್., ಶಿವಯೋಗಿ ಮಹಾನುಭಾವಿಮಠ, ಈಶ್ವರ ಪಾಟೀಲ್, ಡಾ. ಜಿ.ಎಂ.ಕಲ್ಲೇಶ್ವರಪ್ಪ ಸ್ಪರ್ಧೆ ಮಾಡಲಿದ್ದಾರೆ.
ಉಪ ಚುನಾವಣೆಗೆ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಎ.ಎಂ.ನಾಯ್ಕ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನ ನಾಲ್ಕು ಜನ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. 9 ಜನ ಕಣದಲ್ಲಿದ್ದಾರೆ. ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ಐಸಿಹಾಸಿಕ ಕಾಲದಿಂದಲೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಜಿದ್ದಾಜಿದ್ದಿ ಕ್ಷೇತ್ರವಾಗಿದೆ. ಹೀಗಾಗಿ ಈ ಬಾರಿಯ ಉಪ ಚುನಾವಣೆಯಲ್ಲಿ ಅರುಣ್ ಕುಮಾರ್ ಪೂಜಾರ್ ಹಾಗೂ ಹಿರಿಯ ರಾಜಕಾರಣಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ನಡುವಿನ ಪೈಪೋಟಿ ಜೋರಾಗಿದೆ.