ಹಾವೇರಿ : ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮಸ್ಥರಿಗೆ ಮಳೆಗಾಲ ಬಂದರೆ ಸಾಕು ಆತಂಕ ಮನೆ ಮಾಡುತ್ತದೆ. ಇವರ ಆತಂಕಕ್ಕೆ ಕಾರಣ ತಮ್ಮ ಜಮೀನು ಬಳಿ ಇರುವ ಕೆರೆ. ಈ ಗ್ರಾಮದ 150 ಕ್ಕೂ ಅಧಿಕ ರೈತರು ಕೆರೆಯ ಪಕ್ಕದಲ್ಲಿ ಸುಮಾರು ಇನ್ನೂರು ಎಕರೆ ಜಮೀನು ಹೊಂದಿದ್ದಾರೆ. ಮಳೆಗಾಲ ಬಂದರೆ ಸಾಕು ಜಮೀನಿನ ಪಕ್ಕದಲ್ಲಿನ ಕೆರೆ ತುಂಬಿ ಜಮೀನು ಮತ್ತು ಗ್ರಾಮದ ಸಂಪರ್ಕ ಕಡಿತಗೊಳ್ಳುತ್ತಿದೆ. ಮಳೆಗಾಲ ಕಡಿಮೆಯಾಗಿ ಕೆರೆ ನೀರು ಕಡಿಮೆಯಾಗುವವರೆಗೊ ಇವರಿಗೆ ಜಮೀನಿಗೆ ಹೋಗಲು ದಾರಿಯಿಲ್ಲದಂತಾಗುತ್ತಿದೆ.
ಸುಮಾರು ಎರಡು ಕಿ.ಮೀ ಉದ್ದವಿರುವ ಕೆರೆಯನ್ನು ದಾಟಿ ಬರಲು ಇವರಿಗೆ ಪರ್ಯಾಯ ಮಾರ್ಗವಿಲ್ಲ. ಇದರಿಂದಾಗಿ ಈ ಗ್ರಾಮಸ್ಥರು ಮಳೆಗಾಲ ಬಂದರೆ ಕೃಷಿ ಕಾರ್ಯ ಮಾಡಲು ಪರದಾಡುತ್ತಾರೆ. ಬೆಳೆಗಳಿಗೆ ಗೊಬ್ಬರ, ಕೀಟನಾಶಕ, ಕಳೆ ತೆಗೆಯಲು ಮತ್ತು ಬೆಳೆದ ಉತ್ಪನ್ನಗಳನ್ನು ತರಲು ಇವರಿಗೆ ತೆಪ್ಪವನ್ನು ಅವಲಂಬಿಸಬೇಕಾಗಿದೆ. ಈಜು ಬರುವ ರೈತರು ಈಜಿ ತಮ್ಮ ಜಮೀನುಗಳಿಗೆ ತೆರಳುತ್ತಾರೆ. ಈಜು ಬಾರದ ರೈತರು ಜೀವ ಕೈಯಲ್ಲಿಡಿದು ಹಗ್ಗದ ಸಹಾಯದಿಂದ ತೆಪ್ಪದ ಸಹಾಯದಿಂದ ಜಮೀನಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಿಡ್ಲಾಪುರ ಗ್ರಾಮವು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರದಲ್ಲಿದೆ. ಸ್ವತಃ ಸಿಎಂ ಪ್ರತಿನಿಧಿಸುವ ಕ್ಷೇತ್ರದಲ್ಲಿದ್ದರೂ ಯಾವ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿಲ್ಲ. ಕಳೆದ 30 ವರ್ಷಗಳಿಂದ ಗ್ರಾಮಸ್ಥರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಅವರು ಈ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಸಮಸ್ಯೆ ಕುರಿತಂತೆ ಪ್ರತಿವರ್ಷ ಅವರಿಗೆ ಮನವಿ ಸಲ್ಲಿಸಲಾಗುತ್ತದೆ. ಅವರೂ ಈ ಬಗ್ಗೆ ಎರಡು ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಕೆರೆಗೆ ಸಮರ್ಪಕ ಸೇತುವೆ ನಿರ್ಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಓದಿ :ಬೆಳಗಾವಿಯಲ್ಲಿ ಮಳೆ: ಸೇತುವೆ, ರಸ್ತೆಗಳು ಜಲಾವೃತ.. ಶಾಸಕಿ ನಿಂಬಾಳ್ಕರ್ ಭೇಟಿ, ಪರಿಶೀಲನೆ